ಕುಂಬ್ಡಾಜೆಯಲ್ಲಿ ಕಾಡುಹಂದಿಗಳ ಉಪಟಳ

ಕೃಷಿ ನಾಶದಿಂದ ಕಂಗಾಲಾದ ರೈತರು
ಕಾಡುಹಂದಿಗಳ ಉಪಟಳದಿಂದ ಕೃಷಿಗೆ ಹಾನಿಯಾಗಿರುವುದು.
ಕಾಡುಹಂದಿಗಳ ಉಪಟಳದಿಂದ ಕೃಷಿಗೆ ಹಾನಿಯಾಗಿರುವುದು.
Published on: 

ಬದಿಯಡ್ಕ: ಕುಂಬ್ಡಾಜೆ ಗ್ರಾಪಂ ವ್ಯಾಪ್ತಿಯ ಬೆಳಿಂಜ, ಅಲಿಂಜ, ಪೊಸಲಿಗೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಡುಹಂದಿಗಳ ಹಾವಳಿ ಮಿತಿಮೀರಿದ್ದು, ಲಕ್ಷಾಂತರ ರೂ. ಮೌಲ್ಯದ ಕೃಷಿ ಬೆಳೆಗಳು ನಾಶವಾಗಿವೆ. ಕೆಲವು ದಿನಗಳಿಂದ ರಾತ್ರಿ ವೇಳೆ ಹಿಂಡು ಹಿಂಡಾಗಿ ತೋಟ ಮತ್ತು ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡುಹಂದಿಗಳು ರೈತರು ಕಷ್ಟಪಟ್ಟು ಬೆಳೆಸಿದ ಅಡಿಕೆ, ತೆಂಗು, ಬಾಳೆಗಿಡಗಳನ್ನು ಬುಡಸಮೇತ ಕಿತ್ತು ಹಾಕುತ್ತಿವೆ.

ಭತ್ತದ ಗದ್ದೆಗಳಿಗೂ ನುಗ್ಗಿ ಬೆಳೆ ಸಂಪೂರ್ಣವಾಗಿ ಹಾಳುಗೆಡವಿದ್ದು, ಈ ಭಾಗದ ಕೃಷಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡುಹಂದಿಗಳ ಹಾವಳಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಕೂಡಲೇ ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕಾಡುಹಂದಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಕೃಷಿಕರು ಒತ್ತಾಯಿಸಿದ್ದಾರೆ.