ನ್ಯಾಯಯುತ ಪರಿಹಾರಕ್ಕೆ ಆಗ್ರಹ : ಬೆಳೆ ವಿಮೆ ಪರಿಹಾರ ಕಡಿಮೆ ಜಮೆ ಕುರಿತು ಶಾಸಕರ ನೇತೃತ್ವದಲ್ಲಿ ಸಭೆ

ಸುಳ್ಯ ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸುಳ್ಯ ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
Published on
ಸುಳ್ಯ ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಲ್ಲಿ ಕೃಷಿಕರಿಗೆ ಕಡಿಮೆ ಮೊತ್ತ ಪಾವತಿಯಾಗಿದೆ ಎಂಬ ವಿಚಾರದ ಕುರಿತು ಸುಳ್ಯ ತಾಪಂ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ, ಪ್ರಮುಖರ ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ನ್ಯಾಯಯುತ ಪರಿಹಾರಕ್ಕೆ ಆಗ್ರಹ ವ್ಯಕ್ತವಾಯಿತು.
ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಈ ಬಾರಿ ಕಡಿಮೆ ಮೊತ್ತ ಜಮೆ ಆಗಿದೆ. ಹವಾಮಾನ ದತ್ತಾಂಶ ಸಲ್ಲಿಕೆಯಲ್ಲಿ ಆಗಿರುವ ವ್ಯತ್ಯಾಸದಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಆದ್ದರಿಂದ ದಾಖಲಾದ ಮಳೆ, ಉಷ್ಣಾಂಶದ ಪರಿಷ್ಕೃತ ದತ್ತಾಂಶ ಪಡೆದು ಅದನ್ನು ವಿಮಾ ಕಂಪನಿಗೆ ನೀಡಿ ನ್ಯಾಯಯುತವಾದ ಪರಿಹಾರ ಒದಗಿಸಲು ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಲಾಯಿತು.
ಈ ಹಿಂದೆ ಸುಳ್ಯ ತಾಲೂಕಿನಲ್ಲಿ ಕೃಷಿಕರಿಗೆ ಉತ್ತಮ ಪರಿಹಾರ ಮೊತ್ತ ಪಾವತಿಯಾಗಿತ್ತು. ಕಳೆದ ವರ್ಷ ಅಧಿಕ ಮಳೆ ಮತ್ತು ಉಷ್ಣಾಂಶ ದಾಖಲಾದರೂ ಈ ಬಾರಿ ವಿಮಾ ಪರಿಹಾರ ತುಂಬಾ ಕಡಿಮೆ ಪಾವತಿಯಾಗಿದೆ. ಹವಾಮಾನ ದತ್ತಾಂಶ ಸಲ್ಲಿಕೆಯಲ್ಲಾದ ವ್ಯತ್ಯಾಸದಿಂದ ಈ ರೀತಿ ಕಡಿಮೆ ಪರಿಹಾರ ಪಾವತಿಯಾಗಿರುವ ಸಾಧ್ಯತೆ ಇದೆ. ಇದನ್ನು ಸರಿಪಡಿಸಿ ನ್ಯಾಯಯುತ ಪರಿಹಾರ ದೊರಕಿಸಬೇಕು ಎಂದು ಪ್ರಮುಖರು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ನಡೆಸಿ ಈ ಕುರಿತು ಸರ್ಕಾರಿ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಮುಖರಾದ ಕಿಶೋರ್ ಕುಮಾರ್ ಶಿರಾಡಿ, ಹರೀಶ್ ಕಂಜಿಪಿಲಿ, ಎಂ.ವೆಂಕಪ್ಪ ಗೌಡ, ಸಂತೋಷ್ ಕುತ್ತಮೊಟ್ಟೆ, ವಿಕ್ರಮ್ ಎ.ವಿ.ಅಡ್ಪಂಗಾಯ, ರಮಾನಂದ ಎಣ್ಣೆಮಜಲು, ಸುದರ್ಶನ ಪಾತಿಕಲ್ಲು, ಪುರುಷೋತ್ತಮ ಕೋಲ್ಚಾರು ಮತ್ತಿತರರು ಒತ್ತಾಯಿಸಿದರು.
ತಹಸೀಲ್ದಾರ್ ಎಂ.ಮಂಜುಳಾ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಕೃಷಿ ಇಲಾಖೆ ಸಹಾಯ ನಿರ್ದೇಶಕ ಗುರುಪ್ರಸಾದ್, ವಿಮಾ ಕಂಪನಿ ಪ್ರತಿನಿಧಿ ವಿನಯ ಕುಮಾರ್ ಮಾಹಿತಿ ನೀಡಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಎ.ಟಿ.ಕುಸುಮಾಧರ, ಪ್ರಮುಖರಾದ ಅವಿನಾಶ್ ಕುರುಂಜಿ, ಸುನೀಲ್ ಕೇರ್ಪಳ, ಡಾ.ಲಕ್ಷ್ಮೀಶ, ಜಯಪ್ರಕಾಶ್ ಕೂಜುಗೋಡು, ಮಹೇಶ್ ಕುಮಾರ್ ಮೇನಾಲ, ಹೂವಪ್ಪ ಸಂಪ್ಯಾಡಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸುಹಾನ, ಅರಬಣ್ಣ ಪೂಜೇರಿ, ವಿಜೇತ್ ಮತ್ತಿತರರು ಉಪಸ್ಥಿತರಿದ್ದರು.

ಜ.30ರೊಳಗೆ ಪಾವತಿಯಾಗಲಿ

ಕೃಷಿಕರಿಗೆ ಮಳೆ, ಉಷ್ಣಾಂಶ ಮಾಪನ ವರದಿ ಲಭ್ಯವಾಗುವಂತೆ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪನೆ ಮಾಡಬೇಕು. ಮುಂದಿನ ದಿನಗಳಲ್ಲಿ ಬೆಳೆ ವಿಮೆ ನೀಡುವ ಸಂದರ್ಭ ಈ ದತ್ತಾಂಶಗಳನ್ನು ಕೂಡ ತಾಳೆ ಮಾಡಬೇಕು ಎಂದು ಪ್ರಮುಖರು ಸಭೆಯಲ್ಲಿ ಆಗ್ರಹಿಸಿದರು. ಜ.30ರೊಳಗೆ ಎಲ್ಲ ಕೃಷಿಕರಿಗೂ ಸರಿಯಾದ ಪ್ರಮಾಣದಲ್ಲಿ ಬೆಳೆವಿಮೆ ಪಾವತಿಯಾಗಬೇಕು ಎಂದು ಕೃಷಿಕ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ರೈತರಿಗೆ ಬೆಳೆವಿಮೆಯ ಸೂಕ್ತ ಪರಿಹಾರ ಪಾವತಿಯಾಗಿಲ್ಲ ಎಂಬ ಕೂಗು ಕೇಳಿಬಂದಿದೆ. ನ್ಯಾಯಯುತವಾದ ಪರಿಹಾರ ಪಾವತಿಯಾಗಬೇಕು ಎಂಬ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಈ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ, ಸರ್ಕಾರದ ಗಮನಕ್ಕೆ ತಂದು ನ್ಯಾಯಯುತ ಪರಿಹಾರ ಒದಗಿಸಲು ಪ್ರಯತ್ನ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net