ರೈಲಿನಲ್ಲಿ ಎಂಡಿಎಂಎ ಸಾಗಾಟ, ಮತ್ತಿಬ್ಬರ ಬಂಧನ

ನೀಲೇಶ್ವರ ಠಾಣೆ ಪೊಲೀಸರ ತಂಡ ಕಾರ್ಯಾಚರಣೆ
CRIME
CRIME
Published on: 

ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ 665.67 ಗ್ರಾಂ ಮಾರಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸೋಂಕಾಲು ಪ್ರತಾಪನಗರ ನಿವಾಸಿಗಳಾದ ಯೂಸುಫ್ ಅಫ್ಜಲ್ (35) ಮತ್ತು ನೌಶಾದಲಿ (40) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಪ್ರತಾಪ್ ನಗರ ಸೋಂಕಾಲಿನ ನಿವಾಸಿಗಳಾದ ಪಿ.ಎಚ್.ಅಹಮ್ಮದ್ ರುಕ್ಸಾದ್ ಮತ್ತು ಅಬ್ದುಲ್ ಹಮೀದ್‌ನನ್ನು ಪೊಲೀಸರು ನೀಲೇಶ್ವರ ರೈಲು ನಿಲ್ದಾಣದಲ್ಲಿ ಬಂಧಿಸಿ 665.67 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಬಂಧಿತರು ನೀಡಿದ ಮಾಹಿತಿಯಂತೆ ಯೂಸುಫ್ ಅಫ್ಜಲ್ ಮತ್ತು ನೌಶಾದಲಿಯನ್ನು ನೀಲೇಶ್ವರ ಠಾಣೆ ಎಸ್‌ಐ ಸಿ.ಎಂ.ಸಾಬು ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ನಿಷೇಧಿತ ತಂಬಾಕು ಉತ್ಪನ್ನ ವಶ

ಕಾಸರಗೋಡು: ಕರ್ನಾಟಕದಿಂದ ಕೇರಳಕ್ಕೆ ಭಾರಿ ಪ್ರಮಾಣದಲ್ಲಿ ನಿಷೇಧಿತ ತಂಬಾಕು ಉತ್ಪನ್ನ ತಂದು ವಿತರಿಸುವ ಜಾಲದ ಸದಸ್ಯ, ಕಾಸರಗೋಡು ನಿವಾಸಿ ಹನೀಫ (37) ಎಂಬಾತನನ್ನು ಕಣ್ಣೂರು ಪಳ್ಳಿಕುನ್ನುವಿನಲ್ಲಿ ಬಂಧಿಸಲಾಗಿದೆ. ಈತ ಮಂಗಳೂರಿನಿಂದ ಎರ್ನಾಕುಲಂವರೆಗಿರುವ ವಿವಿಧ ಪ್ರದೇಶಗಳಿಗೆ ಕೇರಳದಲ್ಲಿ ನಿಷೇಧಿಸಲಾಗಿರುವ ತಂಬಾಕು ಉತ್ಪನ್ನಗಳನ್ನು ವಿತರಿಸುತ್ತಿದ್ದ. ರಹಸ್ಯ ಮಾಹಿತಿ ಮೇರೆಗೆ ಕಣ್ಣೂರು ನಗರ ಪೊಲೀಸ್ ಆಯುಕ್ತರು ಈತನ ಮೇಲೆ ನಿಗಾ ಇರಿಸಿದ್ದು, ಆರೋಪಿಯನ್ನು ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ಸಾಗಾಟಕ್ಕೆ ಬಳಸಿದ್ದ ವಾಹನ, 325ರಷ್ಟು ಪ್ಯಾಕೆಟ್‌ಗಳಲ್ಲಿ ತುಂಬಿಸಿಡಲಾಗಿದ್ದ ವಿವಿಧ ರೀತಿಯ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ.

ಲಾರಿಯಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ಕುಂಬಳೆ ಸಮೀಪದ ಅನಂತಪುರದಲ್ಲಿ ಕಾರ್ಖಾನೆಯಲ್ಲಿ ಫ್ಲೈವುಡ್ ತುಂಬಿಸಿದ್ದ ಲಾರಿಯನ್ನೇರಿ ಹಗ್ಗ ಬಿಗಿಯುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದು ಕಾರ್ಮಿಕ, ಅಸ್ಸಾಂ ಸಲ್ಫಾರ ನಿವಾಸಿ ಹಬೀಬುಲ್ ರಹ್ಮಾನ್ (51) ಮೃತಪಟ್ಟಿದ್ದಾರೆ. ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನ ಫ್ಲೈವುಡ್ ಕಾರ್ಖಾನೆಯ ಕಾರ್ಮಿಕರಾಗಿದ್ದ ಅವರು, ಲಾರಿಯನ್ನೇರಿ ಹಗ್ಗ ಬಿಗಿಯುತ್ತಿದ್ದಾಗ ದುರಂತ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net