ಚೆನ್ನೈನಲ್ಲಿ ಎಂಡಿಎಂಎ ವಶ, ಉಪ್ಪಳ ನಿವಾಸಿಗಳಿಬ್ಬರ ಬಂಧನ

CRIME
CRIME
Published on: 

ಕಾಸರಗೋಡು: ಚೆನ್ನೈನಲ್ಲಿ 164 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳದ ಫಿರ್ದೌಸ್ ನಗರದ ಅನಿಷ್ ಮಂಜಿಲ್‌ನ ಮುಹಮ್ಮದ್ ಹಸ್ನುದ್ದೀನ್(25) ಮತ್ತು ಮಣ್ಣಂಗುಯಿ ಕೋಡಿಬಯಲಿನ ಸಾಹಿದ್(25) ಎಂಬುವರನ್ನು ಚೆನ್ನೈನ ಚೇಟ್‌ಪೇಟ್ ಸರ್ಕಲ್ ಇನ್‌ಸ್ಪೆಕ್ಟರ್ ತಿರುಮಲೈ ನೇತೃತ್ವದ ತಂಡ ಬಂಧಿಸಿದೆ. ಮಂಜೇಶ್ವರ ಪೊಲೀಸರ ನೆರವಿನಿಂದ ಸೋಮವಾರ ರಾತ್ರಿ ಇಬ್ಬರನ್ನೂ ಬಂಧಿಸಲಾಗಿದೆ. ನೈಜೀರಿಯಾ ಪ್ರಜೆಯೊಬ್ಬ ತಮಗೆ ಮಾದಕ ದ್ರವ್ಯ ನೀಡಿರುವುದಾಗಿ ಬಂಧಿತ ಮುಹಮ್ಮದ್ ಹಸ್ನುದ್ದೀನ್ ಹಾಗೂ ಸಾಹಿದ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಗೇರುತೋಟದಲ್ಲಿ ಶಿಕ್ಷಕಿ ಮೃತದೇಹ ಪತ್ತೆ

ಕಾಸರಗೋಡು: ಮುಳ್ಳೇರಿಯ ಸನಿಹದ ಆದೂರು ಬೆಂಗತ್ತಡ್ಕ ನಿವಾಸಿ, ಅಂಗನವಾಡಿ ಶಿಕ್ಷಕಿ ಬೇಬಿ (46) ಮೃತದೇಹ ಕೆಲಸ ನಿರ್ವಹಿಸುವ ಅಂಗನವಾಡಿ ಸನಿಹದ ಗೇರುತೋಟದಲ್ಲಿ ಪತ್ತೆಯಾಗಿದೆ. ವಿಷಸೇವಿಸಿ ಆತ್ಮಹತ್ಯೆಗೈದಿರಬೇಕೆಂದು ಸಂಶಯಿಸಲಾಗಿದೆ. ಅಂಗನವಾಡಿ ಕಟ್ಟಡ ಕೇರಳ ತೋಟಗಾರಿಕಾ ನಿಗಮದ ಗೇರುತೋಟದ ಅಂಚಿನಲ್ಲಿದ್ದು, ಬುಧವಾರ ಮಧ್ಯಾಹ್ನ ಮೃತದೇಹ ಕಂಡುಬಂದಿತ್ತು. ಅದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪಿಎಂಎವೈ ಯೋಜನಾ ಮೊತ್ತದಲ್ಲಿ ಗೋಲ್‌ಮಾಲ್

ಕಾಸರಗೋಡು: ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಪಿಎಂಎವೈ ಯೋಜನಾ ಮೊತ್ತದಿಂದ 17 ಲಕ್ಷ ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡ ಬ್ಲಾಕ್ ಪಂಚಾಯಿತಿಯ ಸೀನಿಯರ್ ಕ್ಲರ್ಕ್, ತ್ರಿಶ್ಯೂರ್ ಅತ್ತಾಣಿ ನಿವಾಸಿ ಸಿ.ಎನ್.ರಾಮ್‌ದಾಸ್ (43) ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಕೆ.ಹರೀಶ್ ದೂರು ನೀಡಿದ್ದಾರೆ. ಸೆ.24 ರಿಂದ ಅ.31ರ ಕಾಲಾವಧಿಯಲ್ಲಿ ಯೋಜನಾ ಫಂಡ್‌ನಲ್ಲಿ ಅವ್ಯವಹಾರ ನಡೆಸಲಾಗಿದೆ. 57 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಹಣ ಕಾಯ್ದಿರಿಸಲಾಗಿತ್ತು. ಬಿಲ್‌ನಲ್ಲಿ 15 ಮಂದಿಯ ಮೊತ್ತ ಫಲಾನುಭವಿಗಳಿಗೆ ನೀಡುವ ಬದಲು ತನ್ನ ಬೇನಾಮಿ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಎಸಗಲಾಗಿದೆ. ಒಟ್ಟು 16,80,00 ರೂ.ನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.