ಟೂತ್‌ಪೇಸ್ಟ್‌ನಲ್ಲಿ ಜೈಲ್‌ಗೆ ಎಂಡಿಎಂಎ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ನೀಡಲು ಟೂತ್ ಪೇಸ್ಟ್‌ನೊಳಗಿಟ್ಟು ತಂದಿದ್ದ ಎಂಡಿಎಂಎ ಮಾದರಿ ಪುಡಿ ಸಹಿತ ಓರ್ವನನ್ನು ಕಾರಾಗೃಹದ ಭದ್ರತೆಗೆ ನಿಯೋಜನೆ ಮಾಡಿರುವ ಪೊಲೀಸರು ವಶಕ್ಕೆ ಪಡೆದು, ಬರ್ಕೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಅವರು ನೀಡಿದ ದೂರಿನಂತೆ ಆರೋಪಿ ಉರ್ವಸ್ಟೋರ್ ನಿವಾಸಿ ಆಶಿಕ್ ಎಂಬಾತನನ್ನು ಬಂಧಿಸಿದ್ದಾರೆ.
ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿರುವ ಅನ್ವಿತ್ ಎಂಬಾತನನ್ನು ಸಂದರ್ಶಿಸಲು ಡಿ.1ರಂದು ಮಧ್ಯಾಹ್ನ 12.45ರ ವೇಳೆಗೆ ಬಂದಿದ್ದ. ಕೈದಿಗೆ ನೀಡಲು ತಂದಿದ್ದ ಬೇಕರಿ ತಿಂಡಿಗಳಾದ 40 ಪ್ಯಾಕೆಟ್ ಬಿಸ್ಕಟ್, 1 ಪ್ಯಾಕೆಟ್ ಮಿಕ್ಸ್ಚರ್, 1 ಪ್ಯಾಕೆಟ್ ಚಕ್ಕುಲಿ ಹಾಗೂ 1 ಟೂತ್ ಪೇಸ್ಟನ್ನು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಐ.ಎಸ್.ಎಫ್. ಸಿಬಂದಿ ಶಶಿಕುಮಾರ ಮೇಲಿನಮನೆ ಹಾಗೂ ಶೇಖರ ಡಿ.ಕೆ. ಅವರು ಬಾಡಿವಾರ್ನ್ ಕೆಮರಾ ಧರಿಸಿ ಕೈ ಹಾಗೂ ಲಭ್ಯ ಭದ್ರತಾ ಸಲಕರಣೆಗಳಿಂದ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಟೂತ್ ಪೇಸ್ಟ್ ಒಳಭಾಗದಲ್ಲಿ ಅನುಮಾನಾಸ್ಪದ ವಸ್ತುಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೇ ಉಸ್ತುವಾರಿ ಅಧಿಕಾರಿ ಕಿರಣ ಅಂಬಿಗ ಅವರಿಗೆ ಮಾಹಿತಿ ನೀಡಿದ್ದು ಅವರು ಬಂದು, ಪೇಸ್ಟ್ ತೆರದು ಕೂಲಂಕುಶವಾಗಿ ಪರಿಶೀಲಿಸಿದ್ದಾರೆ. ಆಗ 2 ತುಂಡು ಪ್ಲಾಸ್ಟಿಕ್ ಸ್ಟ್ರಾ ಹಾಗೂ 1 ಪ್ಲಾಸ್ಟಿಕ್ ಪೊಟ್ಟಣ ಪತ್ತೆಯಾಗಿದೆ. ಸಹಾಯಕ ಕಮಾಂಡೆಂಟ್ ಸ್ಥಳಕ್ಕೆ ತೆರಳಿ, ಪರಿಶೀಲಿಸಿದಾಗ ಎಂಡಿಎಂಎ ಯಂತೆ ಕಾಣುವ ಬಿಳಿ ಬಣ್ಣದ ಹರಳಿನಂತಿರುವ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ.
ಈ ಬಗ್ಗೆ ಆಶಿಕ್ ಬಳಿ ವಿಚಾರಿಸಿದಾಗ, ಕಾರಾಗೃಹದಲ್ಲಿ ಮುಂಭಾಗದ ಜೆರಾಕ್ಸ್ ಅಂಗಡಿ ಹತ್ತಿರ ವ್ಯಕ್ತಿಯೊಬ್ಬ ಕೆಲವು ಬೇಕರಿ ತಿಂಡಿಗಳನ್ನು ನೀಡಿದ್ದು, ಅದನ್ನು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಅನ್ವಿತ್ ಗೆ ನೀಡುವಂತೆ ಸಚಿನ್ ತಲಪಾಡಿ ಎಂಬಾತನ ಸೂಚನೆಯಂತೆ ತಂದಿರುವುದಾಗ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net