ಮಂಗಳೂರು: ನಗರದ ಕದ್ರಿ ಕಂಬಳ ಬಳಿ ಶುಕ್ರವಾರ ಸಂಜೆ ವಾಕಿಂಗ್ ಮಾಡುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾನೆ.
ಸ್ಥಳೀಯ ನಿವಾಸಿ ರೇವತಿ (83) ಚಿನ್ನದ ಸರ ಕಳೆದುಕೊಂಡವರು. ಶುಕ್ರವಾರ ಸಂಜೆ 5.30ರ ವೇಳೆಗೆ ವಾಕಿಂಗ್ ಮಾಡುತ್ತಾ ಕದ್ರಿ ಕಂಬಳ ರಸ್ತೆಗೆ ಬಂದಿದ್ದು, ಅಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸ್ಕೂಟರ್ ನಲ್ಲಿ ಬಂದು ನಿಲ್ಲಿಸಿ ರಿಪೇರಿ ಮಾಡುವ ರೀತಿಯಲ್ಲಿ ನಟಿಸಿದ್ದಾನೆ. ಬಳಿಕ ರೇವತಿ ಅವರನ್ನು ಉದ್ದೇಶಿಸಿ ಚಿಕ್ಕ ಸ್ಕ್ರೂ ಡ್ರೈವರನ್ನು ತರುವಂತೆ ತುಳುವಿನಲ್ಲಿ ಹೇಳಿದ್ದಾನೆ. ಅದರಂತೆ ಸ್ಕ್ರೂ ಡ್ರೈವರ್ ತರಲು ಓಣಿಯಲ್ಲಿ ಮನೆಯ ಕಡೆ ಬರುತ್ತಿರುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಯಲ್ಲಿ ಧರಿಸಿದ್ದ 13 ವರ್ಷಳಷ್ಟು ಹಿಂದಿನ ಕೊತ್ತಂಬರಿ ಆಕಾರದ 2 ಪವನ್ ತೂಕದ ಚಿನ್ನದ ಚೈನನ್ನು ಎಳೆದುಕೊಂಡು ಹೋಗಲು ಯತ್ನಿಸಿದ್ದಾನೆ. ಆಗ ಚೈನಿನ ಸುಮಾರು 4 ಗ್ರಾಂ ತೂಕದ ತುಂಡು ನೆಲಕ್ಕೆ ಬಿದ್ದಿದೆ. ಚೈನ್ ನ ಭಾಗವನ್ನು ಅಪರಿಚಿತ ವ್ಯಕ್ತಿಯು ಎಳೆದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಆತನ ಎಳೆದುಕೊಂಡ ಹೋದ ಚೈನ್ ನ ಒಟ್ಟು ಮೌಲ್ಯ ಸುಮಾರು 50 ಸಾವಿರ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಅಪರಿಚಿತ ವ್ಯಕ್ತಿಯು ತಲೆಗೆ ಹೆಲ್ಮೆಟ್, ಬೆನ್ನಿನಲ್ಲಿ ಬ್ಯಾಗ್, ಉದ್ದ ತೋಳಿನ ಶರ್ಟ್, ಪ್ಯಾಂಟ್ ಧರಿಸಿದ್ದ ಎಂದು ನೀಡಿದ ದೂರಿನಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.