ಮಂಗಳೂರು ಕುಂಟಿಕಾನ ಸರ್ವಿಸ್ ರಸ್ತೆ ಮರಣ ಗುಂಡಿಯ ಭೀತಿ

  ಕುಂಟಿಕಾನ ಬಳಿ ಸರ್ವಿಸ್ ರಸ್ತೆಯಲ್ಲಿ ಅಪಾಯಕಾರಿ ಗುಂಡಿ ಉಂಟಾಗಿದೆ.
ಕುಂಟಿಕಾನ ಬಳಿ ಸರ್ವಿಸ್ ರಸ್ತೆಯಲ್ಲಿ ಅಪಾಯಕಾರಿ ಗುಂಡಿ ಉಂಟಾಗಿದೆ.
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ ಬಳಿ ಸರ್ವಿಸ್ ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಗುಂಡಿ ಮತ್ತು ಮಳೆ ನೀರು ನಿಂತಿರುವ ಸಮಸ್ಯೆ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಗುಂಡಿ ಸಂಪೂರ್ಣವಾಗಿ ನೀರಿನಿಂದ ಆವರಿಸಿಕೊಂಡಿರುವುದರಿಂದ ಅದರ ಆಳ ಅಂದಾಜಿಸಲು ಸಾಧ್ಯವಾಗದೆ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ.

ಮಳೆ ಬಂದಾಗ ರಸ್ತೆ ಮಧ್ಯಭಾಗದಲ್ಲಿ ನೀರು ಸಂಗ್ರಹವಾಗುವುದರಿಂದ ವಾಹನಗಳು ವೇಗವಾಗಿ ಸಾಗುವಾಗ ಕೆಸರು ಮಿಶ್ರಿತ ನೀರು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ಎರಚಲ್ಪಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿದಿನ ಈ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಸರ್ವಿಸ್ ರಸ್ತೆಯಲ್ಲಿ ಸಂಗ್ರಹವಾಗಿರುವ ನೀರನ್ನು ವಾಹನಗಳು ಚಿಮ್ಮಿಸುವ ಪರಿಣಾಮ ಅದು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳ ಮುಂಭಾಗದ ಗಾಜಿನ ಮೇಲೂ ಎರಚಲ್ಪಡುತ್ತಿದೆ. ಕೆಲ ಕ್ಷಣಗಳ ಕಾಲ ಚಾಲಕರ ದೃಷ್ಟಿ ಮಸುಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಅಪಾಯ ಹೆಚ್ಚಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ಹೊಸದೇನಲ್ಲ. ಹಲವು ತಿಂಗಳುಗಳಿಂದ ರಸ್ತೆ ಹದಗೆಟ್ಟಿದ್ದರೂ ಸಂಬಂಧಿಸಿದ ಇಲಾಖೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ರಸ್ತೆ ಸಂಪೂರ್ಣ ಕೆರೆ ರೂಪ ಪಡೆಯುತ್ತಿದೆ. ಗುಂಡಿಯನ್ನು ತಪ್ಪಿಸಲು ವಾಹನ ಸವಾರರು ಹಠಾತ್ ದಿಕ್ಕು ಬದಲಾಯಿಸುವ ಸಂದರ್ಭಗಳೂ ಹೆಚ್ಚಾಗಿದ್ದು, ಇದರಿಂದ ವಾಹನಗಳ ನಡುವೆ ಡಿಕ್ಕಿಯಾಗುವ ಸಾಧ್ಯತೆಯೂ ಇದೆ.
ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಂಡಿ ನೀರಿನಲ್ಲಿ ಮುಚ್ಚಿ ಹೋಗಿರುವ ಕಾರಣ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ರಸ್ತೆಯ ಸ್ಥಿತಿ ಅರಿಯದ ಹೊರಗಿನಿಂದ ಬರುವ ವಾಹನ ಸವಾರರು ಗುಂಡಿಗೆ ಬಿದ್ದು ನಿಯಂತ್ರಣ ಕಳೆದುಕೊಳ್ಳುವ ಘಟನೆಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ಧಾರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ, ಗುಂಡಿ ಮುಚ್ಚುವಿಕೆ ಹಾಗೂ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು, ಜೀವಹಾನಿ ಸಂಭವಿಸುವ ಮುನ್ನವೇ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು.
ಸಂತೋಷ್ ಎಂ.
ಖಾಸಗಿ ಉದ್ಯೋಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net