

ಮಂಗಳೂರು: ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳ ಬಡ್ಡಿಯ ರೂಪದಲ್ಲಿ ಲಾಭಾಂಶ ದೊರೆಯಲಿದೆ ಎಂದು ನಂಬಿಸಿ, 12 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
62 ವರ್ಷದ ದೂರುದಾರರು 2023ರಲ್ಲಿ ಹೂಡಿಕೆ ಮಾಡುವ ಸಂಬಂಧ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿರುವಾಗ ಕಿಸಾನ್ ಪರಿವಾರ್ ಲಿಮಿಟೆಡ್ ಎನ್ನುವ ಸಂಸ್ಥೆಯ ಬಗ್ಗೆ ತಿಳಿದು ಬಂದಿದೆ. ಸಂಸ್ಥೆಯನ್ನು ಸಂಪರ್ಕಿಸಿದಾಗ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಹಂತ ಹಂತವಾಗಿ ಒಟ್ಟು 12 ಲಕ್ಷ ರೂ. ಸಂಸ್ಥೆಯವರು ನೀಡಿದ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಹೂಡಿಕೆ ಮಾಡಿದ್ದಾರೆ.
ಹೂಡಿಕೆ ಮಾಡಿದ ಹಣಕ್ಕೆ ಸಂಸ್ಥೆಯಿಂದ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ 2025ರ ಸೆ.30ರ ವರೆಗೆ 4.68 ಲಕ್ಷ ರೂ. ಹಣ ಬಂದಿದೆ. ಆದರೆ ಅನಂತರ ಒಂದು ವರ್ಷದಿಂದ ಯಾವುದೇ ಹಣ ಕೊಟ್ಟಿಲ್ಲ. ಈ ಬಗ್ಗೆ ಸಂಸ್ಥೆಯವರನ್ನು ಸಂರ್ಪಕಿಸಿದಾಗ, ಸಂಸ್ಥೆಗೆ ಸ್ವಲ್ಪ ಕಷ್ಟ ಇರುವುದರಿಂದ ಮುಂದಿನ ತಿಂಗಳು ಬಡ್ಡಿಯ ಹಣ ಒಟ್ಟಿಗೆ ಹಾಕುವುದಾಗಿ ತಿಳಿಸಿದ್ದರು. ಆದರೆ ಈ ವರೆಗೆ ಯಾವುದೇ ಹಣ ಸಿಕ್ಕಿಲ್ಲ. ಇದರಿಂದ ಅನುಮಾನ ಬಂದು ತಾನು ಮೋಸ ಹೋಗಿರುವುದು ಅರಿವಾಗಿದೆ.
ಕಿಸಾನ್ ಪರಿವಾರ್ ಲಿಮಿಟೆಡ್ ಹೆಸರಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಹೂಡಿಕೆಯ ಆಮಿಷವೊಡ್ಡಿ ಹಂತ ಹಂತವಾಗಿ ಒಟ್ಟು 12 ಲಕ್ಷ ರೂ. ವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ಈ ರೀತಿ ವಂಚನೆ ಮಾಡಿರುವ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.