ಮಂಗಳೂರು ದಸರಾಕ್ಕೆ ‘ಅಲ್ಪಾನ’ ಮೆರುಗು!

ಕುದ್ರೋಳಿ ದೇಗುಲ ರಸ್ತೆಯಲ್ಲಿ ಮೂಡಿದ ಬಣ್ಣದ ಚಿತ್ತಾರ
ಕುಡ್ರೋಳಿ ದೇವಳದ ರಸ್ತೆಯಲ್ಲಿ ಅರಳಿದ ಅಲ್ಪಾನ ಚಿತ್ತಾರ
ಕುಡ್ರೋಳಿ ದೇವಳದ ರಸ್ತೆಯಲ್ಲಿ ಅರಳಿದ ಅಲ್ಪಾನ ಚಿತ್ತಾರ
Published on: 

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇಗುಲದ ನವರಾತ್ರಿ ಉತ್ಸವ-ಮಂಗಳೂರು ದಸರಾ ಕಾರ್ಯಕ್ರಮದ ಪ್ರಯುಕ್ತ ಈ ಬಾರಿ ಪ್ರಥಮ ಬಾರಿಗೆ ಬೆಂಗಾಳಿ ಕಲೆಯ ಚಿತ್ತಾರವನ್ನು ರಚಿಸಲಾಗಿದೆ. ಅಲ್ಪಾನ ಅಥವಾ ಅಲ್ಪೊನ ಎಂದು ಅರಿಯಲ್ಪಡುವ ಈ ಕಲೆ ಮಂಗಳೂರಿಗರನ್ನು ಆಕರ್ಷಿಸಿದೆ.

ಮಠದಕಣಿಯ ಪಿಕ್ಸಿನ್ಸಿಲ್ ಕಲಾ ಸಂಸ್ಥೆಯ ಪೃಥ್ವಿ ಅವರ 10-12 ಮಂದಿಯ ತಂಡದವರು ಈ ಬಣ್ಣದ ಚಿತ್ತಾರವನ್ನು ಕುದ್ರೋಳಿ ದೇಗುಲದಿಂದ ದ್ವಾರದವರೆಗಿನ ರಸ್ತೆಯ ಉದ್ದಕ್ಕೂ ಬಿಡಿಸಿ ಮೆರುಗು ತಂದಿದ್ದಾರೆ. ಬಗೆಬಗೆಯ ಪೈಂಟ್‌ಗಳನ್ನು ಮಿಶ್ರಣ ಮಾಡಿ ಬ್ರಶ್‌ಗಳ ಮೂಲಕ ಡಾಂಬರು ರಸ್ತೆಯ ಮೇಲೆ ಚಿತ್ರ ಬಿಡಿಸಲಾಗಿದೆ. ಧ್ವಜ, ಪತಾಕೆಗಳ ಹಾರಾಟ, ಜಗಮಗಿಸುವ ವಿದ್ಯುದ್ದೀಪಾಲಂಕಾರಗಳ ಮಧ್ಯೆ ಅಲ್ಪಾನ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಹೂವು, ಶಂಖ, ಎಲೆ ಮೊದಲಾದ ಆಕಾರವನ್ನು ರಚಿಸಿ ಬಣ್ಣ ಹಚ್ಚಿ ಚಿತ್ರ ಬಿಡಿಸಲಾಗಿದೆ.

ಏನಿದು ಅಲ್ಪನಾ ಕಲೆ?

ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಜನಪದ ಕಲೆ ಅಲ್ಪಾನ. ಕರ್ನಾಟಕದಲ್ಲಿ ಮನೆ ಮುಂದೆ, ಧಾರ್ಮಿಕ, ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಿಡಿಸುವ ‘ರಂಗೋಲಿ’ ಕಲೆಯಂಥಹದ್ದೇ ಚಿತ್ತಾರ ‘ಅಲ್ಪನಾ’ ಆಗಿದೆ. ಹಿಂದಿನ ಕಾಲದ ಬಂಗಾಳಿ ಸಂಸ್ಕೃತಿಯಲ್ಲಿ ಈ ಕಲೆ ಹಾಸುಹೊಕ್ಕಾಗಿತ್ತು. ಈ ಕಲೆಯ ಸೌಂದರ್ಯವನ್ನು ಮಂಗಳೂರಿಗೆ ಪರಿಚಯಿಸಿ ಕುದ್ರೋಳಿಯ ರಸ್ತೆಯುದ್ದಕ್ಕೂ ಬಿಡಿಸಿರುವುದು ಇದೇ ಮೊದಲು. ಇದರಿಂದಾಗಿ ದೇಗುಲ ಪರಿಸರಕ್ಕೊಂದು ಸೊಬಗು ಬಂದಿದೆ ಎನ್ನುತ್ತಾರೆ ಮಂಗಳೂರಿನವರು.

ನಾನು ಪದ್ಮರಾಜ್ ಅವರನ್ನು ಸಂಪರ್ಕಿಸಿ ಈ ಕಲೆಯ ಬಗ್ಗೆ ವಿವರಿಸಿದೆ. ಕೂಡಲೇ ಅವರು ಚಿತ್ರ ಬಿಡಿಸಲು ಪ್ರೋತ್ಸಾಹಿಸಿದರು. ಬಂಗಾಳದಲ್ಲಿ ಕಲೆಯಲ್ಲಿ ಮಾಸ್ಟರ್ ಡಿಗ್ರಿ ಮಾಡುವಾಗ ಈ ಕಲೆಯ ಪರಿಚಯವಾಯಿತು. ಮುಂದಕ್ಕೆ ಧಾರ್ಮಿಕ ಕೇಂದ್ರ ಮಾತ್ರವಲ್ಲದೆ ಇತರ ಕಡೆಗಳಲ್ಲಿಯೂ ಬೇಡಿಕೆ ಬಂದರೆ ಚಿತ್ರ ಬಿಡಿಸಿ ಕೊಡುತ್ತೇವೆ.
ಪೃಥ್ವಿ, ಪಿಕ್ಸಿನ್ಸಿಲ್ ಸ್ಟುಡಿಯೋ
ಊರಿನ ಸಮಸ್ತ ಕಲಾವಿದರ ಸಜನಶೀಲ ಕೈಚಳಕದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ರಸ್ತೆಗಳು ರಂಗುರಂಗಿನ ’ಅಲ್ಪಾನ’ ಚಿತ್ತಾರಗಳಿಂದ ಕಣ್ಮನ ಸೆಳೆಯುತ್ತಿದೆ. ಈ ಅದ್ಭುತ ಕಲಾ ಚಿತ್ತಾರ ಪಾವನ ಕ್ಷೇತ್ರದ ಸೌಂದರ್ಯ ಹಾಗೂ ಗಾಂಭೀರ್ಯಕ್ಕೆ ಮತ್ತು ದಸರಾ ಮಹೋತ್ಸವದ ಸಂಭ್ರಮಕ್ಕೆ ವಿಶಿಷ್ಟ ಮೆರುಗು ಮತ್ತು ಹೊಸತೊಂದು ಕಳೆ ತುಂಬಿದೆ.
ಪದ್ಮರಾಜ್ ಆರ್. ಪೂಜಾರಿ, ಕೋಶಾಧಿಕಾರಿ, ಕುದ್ರೋಳಿ ಕ್ಷೇತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net