ನಗರದಲ್ಲಿ ಸಂಭವಿಸಿದ ಹಲವು ಅಪಘಾತ ಪ್ರಕರಣಗಳಿಗೆ ಕಾರಣ ಹಾಗೂ ಭೀಕರತೆ ಕುರಿತಾದ ವೀಡಿಯೋ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ವಿವಿಧ ಶಾಲೆಗಳ ಮಕ್ಕಳಿಗೆ ರಸಪ್ರಶ್ನೆ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಗಮನ ಸೆಳೆಯಲಾಯಿತು. ನಗರದಲ್ಲಿ ಫಲಾಪೇಕ್ಷೆಯಿಲ್ಲದೆ ಟ್ರಾಫಿಕ್ ವಾರ್ಡನ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಸಮಾಜ ಸೇವಕರಾದ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್, ಹಸನ್, ವಾಯ್ಲೆಟ್ ಪಿರೇರಾ, ರೋಶನ್ ರಾಯ್ ಸಿಕ್ವೇರಾ, ಬೂಬಣ್ಣ, ರಮೇಶ್ ಕಾವೂರು, ಬಶೀರ್ ಹಳೆಯಂಗಡಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಕರ್ತವ್ಯದ ಸಂದರ್ಭ ಅಪಘಾತಕ್ಕೀಡಾದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಸಂಚಾರಿ ಪೊಲೀಸ್ ಸಿಬ್ಬಂದಿ ಮನ್ಸಿಜಾ ಬಾನು ಅವರನ್ನು ಅಭಿನಂದಿಸಲಾಯಿತು.