

ಮೂಲ್ಕಿ: ಧಾರ್ಮಿಕ ಆಚರಣೆ ಜತೆಗೆ ಸಮಾಜಮುಖಿಯಾಗಿ ದೀನ ವರ್ಗದ ಜನರಿಗೆ ಸಹಾಯ ನೀಡುವುದು ದೇವರ ಪೂಜೆಗೆ ಸಮನಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ಶ್ರೀ ಕ್ಷೇತ್ರ ಬ್ರಹ್ಮರಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ವತಿಯಿಂದ 49ನೇ ವರ್ಷದ ವಾರ್ಷಿಕ ಮಂಡಲೋತ್ಸವ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಜನಾ ಕಾರ್ಯಕ್ರಮವನ್ನು ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್ ಉದ್ಘಾಟಿಸಿದರು. ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್ ವಿಕಲಚೇತನರಿಗೆ ಸಹಾಯಧನ ವಿತರಿಸಿದರು. ಅತಿಥಿಗಳಾಗಿ ಸಮಿತಿ ಅಧ್ಯಕ್ಷ ಗೋಪಿನಾಥ ಪಡಂಗ, ಪ್ರಧಾನ ಕಾರ್ಯದರ್ಶಿ ದಾಮೋದರ ಮೂಲ್ಕಿ, ಕೋಶಾಧಿಕಾರಿ ರಾಕೇಶ್ ಕರ್ಕೇರ ಮುಕ್ಕ, ಶಿವಶಂಕರ್ ಕೆಎಸ್ ರಾವ್ ನಗರ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣರಾಜ ಭಟ್ ಬಪ್ಪನಾಡು, ಶಿವಾನಂದ ಶಾಂತಿ ಪೌರೋಹಿತ್ಯದಲ್ಲಿ ಗುರುಸ್ವಾಮಿ ಗಿರೀಶ್ ಫಲಿಮಾರ್ ಸಹಯೋಗದೊಂದಿಗೆ ಗಣಪತಿ ಹೋಮ, ಶ್ರೀ ನಾಗದೇವರು ಬ್ರಹ್ಮದೇವರು ರಕ್ತೇಶ್ವರೀ, ಕ್ಷೇತ್ರಪಾಲ, ನಂದಿಗೋಣ, ಪಂಚ ದೈವಗಳಿಗೆ ಪಂಚಪರ್ವ ಸೇವೆ, ಅಷ್ಟಾಭಿಷೇಕ, ತುಪ್ಪ ಅಭಿಷೇಕ, ಕಲಶಾಭಿಷೇಕ ಮಧ್ಯಾಹ್ನ ಅಲಂಕಾರ ಪೂಜೆ ಮಹಾಪೂಜೆ , ಪ್ರಸಾದ ವಿತರಣೆ, ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು.