ಅಪ್ರಾಪ್ತೆಯ ಗರ್ಭವತಿಯನ್ನಾಗಿಸಿದ ಅಪರಾಧಿಗೆ 20 ವರ್ಷ ಕಠಿನ ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೋ-ಎಫ್ ಟಿ ಎಸ್ ಸಿ-2 ) 20 ವರ್ಷ ಕಠಿನ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಮೂಲತಃ ಬಾಗಲಕೋಟೆಯವನಾಗಿದ್ದು, ನಗರದಲ್ಲಿ ಆಟೋಚಾಲಕನಾಗಿರುವ ನಾಗರಾಜ್ ಶಿವಪ್ಪ ದುರಗಣ್ಣವರ(21) ಶಿಕ್ಷೆಗೊಳಗಾದವನು.
ಈತ ತನ್ನ ತಾಯಿಯ ಪರಿಚಯದ ಮಹಿಳೆಯ ಪುತ್ರಿಯ ಜತೆಗೆ ಅನ್ಯೋನ್ಯವಾಗಿದ್ದ. ಆಕೆಯ ಮನೆಗೂ ಆಗಾಗ್ಗೆ ಹೋಗುತ್ತಿದ್ದ. 2025 ರ ಫೆ.25 ಮತ್ತು ಮಾ.13 ರಂದು ಅತ್ತಾವರದಲ್ಲಿರುವ ತನ್ನ ಬಾಡಿಗೆ ಮನೆಗೆ ಆಕೆಯನ್ನು ಕರೆದುಕೊಂಡು ಬಂದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಣಾಮವಾಗಿ ಬಾಲಕಿ ಗರ್ಭವತಿಯಾಗಿದ್ದಳು. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಆರೋಪಿಗೆ ಪೊಕ್ಸೋ ಕಲಂ 6 ರಡಿ 20 ವರ್ಷ ಕಠಿನ ಸಜೆ ಮತ್ತು 40,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ ಮತ್ತು ಬಿಎನ್ ಎಸ್ ಕಲಂ 69 ರಡಿ 5 ವರ್ಷ ಸಾದಾ ಸಜೆ, 10,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತ ಒಟ್ಟು 50,000 ರೂ. ಅಲ್ಲದೆ 6.50 ಲಕ್ಷ ರೂ. ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಮಹಿಳಾ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪೊಕ್ಸೊ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net