ಕಾರು ಡಿಕ್ಕಿ ಹೊಡೆಯಿಸಿ ಕೊಲೆ ಯತ್ನ ಆರೋಪಿಯ ಬಂಧನ

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಆರ್ಯಸಮಾಜ ರಸ್ತೆಯಲ್ಲಿ ಮಂಗಳವಾರ ಎದುರಿನಿಂದ ಹೋಗುತ್ತಿದ್ದ ಸ್ಕೂಟರ್ ಸವಾರನಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆಯಿಸಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಫಳ್ನೀರ್ ನಿವಾಸಿ ಮಹಮ್ಮದ್ ಶರೀಫ್ (26) ಬಂಧಿತ. ಮಲ್ಲಿಕಟ್ಟೆಯ ಮೋಹನ್‌ದಾಸ್ ಶೆಟ್ಟಿ (56) ಕೊಲೆ ಯತ್ನಕ್ಕೊಳಗಾದವರು. ಶೆಟ್ಟಿ ಅವರಿಗೆ ಆರೋಪಿ ಮಹಮ್ಮದ್ ಶರೀಫ್ ಮತ್ತು ಆತನ ತಂದೆ ಮಹಮ್ಮದ್ ಇಕ್ಬಾಲ್ ಅವರ ನಡುವೆ ಭೂ ವ್ಯವಹಾರವಿದೆ. ಸುರತ್ಕಲ್‌ನ ಕಾನ ಮತ್ತು ವಾಮಂಜೂರಿನಲ್ಲಿ ಆರೋಪಿ ಸುಮಾರು 2 ಕೋಟಿ ರೂ. ಹೂಡಿಕೆ ಮಾಡಿದ್ದಾನೆ. ಮೋಹನ್‌ದಾಸ್ ಶೆಟ್ಟಿ ಆರೋಪಿಗೆ ಮೋಸ ಮಾಡಿದ ಸಿಟ್ಟಿನಿಂದ ಮಂಗಳವಾರ ರಸ್ತೆ ಬದಿಯಲ್ಲಿ ಮಾತುಕತೆ ನಡೆಸಿ, ಆರೋಪಿ ಮೊಬೈಲ್ ಕಸಿದುಕೊಂಡಿದ್ದಾನೆ.
ನಂತರ ಮೋಹನ್‌ದಾಸ್ ಶೆಟ್ಟಿ ತನ್ನ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆರೋಪಿ ಸಿಟ್ಟಿನಿಂದ ತನ್ನ ಇನ್ನೋವಾ ಕ್ರಿಸ್ಟಾ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು ಎದುರಿನಿಂದ ಹೋಗುತ್ತಿದ್ದ ದೂರುದಾರರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದ್ದಾನೆ. ಸಿಸಿಟಿವಿಯಲ್ಲಿ ಅಪಘಾತ ಮಾಡಿದ ದೃಶ್ಯ ಸೆರೆಯಾಗಿದೆ. ಈಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net