

ಕಾಸರಗೋಡು: ಫೇಸ್ಬುಕ್ನಲ್ಲಿ ಕಂಡ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಕುಂಬಳೆಯ ಬಂದ್ಯೋಡು ಅಡ್ಕ ನಿವಾಸಿ ಶಫೀಕ್ಆಲಿ 1.94 ಲಕ್ಷ ರೂ. ಕಳೆದುಕೊಂಡಿದ್ದು ಕುಂಬಳೆ ಠಾಣೆಗೆ ದೂರು ನೀಡಿದ್ದಾರೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಿರುವ ಅರ್ಜಿ ಆಹ್ವಾನಿಸಿರುವುದಾಗಿ ಫೇಸ್ಬುಕ್ ಮೂಲಕ ಜಾಹೀರಾತು ಕಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜಾಹೀರಾತಿನ ಲಿಂಕ್ಗೆ ಕ್ಲಿಕ್ ಮಾಡಿದಾಗ ಬ್ಯಾಂಕ್ನ ಸೈಟ್ ತೆರೆದುಕೊಂಡಿದೆ. ಸ್ವಲ್ಪಹೊತ್ತಿನಲ್ಲಿ ಶಫೀಕ್ಆಲಿ ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 1,93,997 ರೂ. ನಗದು ವರ್ಗಾವಣೆಯಾಗಿದೆ. ತಕ್ಷಣ ಬ್ಯಾಂಕ್ ಕಚೇರಿ ಸಂಪರ್ಕಿಸಿ, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಸರಗೋಡು: ಕುಂಬಳೆ ಸಮೀಪದ ವಿವಿಧ ಹೊಳೆಗಳಿಂದ ಅನಧಿಕೃತವಾಗಿ ಮರಳು ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಪೊಲೀಸರು ಮರಳು ಸಂಗ್ರಹಿಸುತ್ತಿದ್ದ ಎರಡು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಶಿರಿಯ ಹೊಳೆಯ ಪಾಚಾಣಿ ಸಮೀಪ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮರಳು ಸಂಗ್ರಹದ ಕಡವು ಪತ್ತೆಚ್ಚಿದ್ದು, ಅಲ್ಲಿಂದ ವಶಪಡಿಸಿಕೊಳ್ಳಲಾದ ಎರಡು ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಕುಂಬಳೆ ಠಾಣೆ ಎಸ್ಐ ಎಸ್.ಅನೂಪ್, ಎಸ್ಐ ಅತುಲ್ ರಾಂ ನೇತೃತ್ವದ ತಂಡ ದಾಳಿ ನಡೆಸಿತು. ಪಾಚಾಣಿ, ಕಲ್ಪಾರೆ, ಇಚ್ಲಂಗೋಡು, ಉಳುವಾರ್ ಮೊದಲಾದ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಕಾಸರಗೋಡು: ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ಎರಡು ಲಕ್ಷ ರೂ.ಗೂ ಹೆಚ್ಚು ಹಣವನ್ನು ವಂಚಕರು ಎಗರಿಸಿರುವ ಬಗ್ಗೆ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸದುರ್ಗ ವೆಳ್ಳಿಕೋತ್ ‘ಮಹಾಲಸಾ ಕೃಷ್ಣ ಹೌಸ್’ನ ರವೀಂದ್ರನಾಥ್ ಪೈ (74) ಅವರ ಬ್ಯಾಂಕ್ ಖಾತೆಗಳ ಪೂರ್ಣ ಮಾಹಿತಿ ಸಂಗ್ರಹಿಸಿದ ಅಪರಿಚಿತ ವ್ಯಕ್ತಿಗಳು 2,06,999 ರೂ.ನ್ನು ಆನ್ಲೈನ್ ಮೂಲಕ ಸೆಪ್ಟೆಂಬರ್ 1ರಂದು ಸಂಜೆ 4.30ರಿಂದ 7.30ರ ಮಧ್ಯೆ ಎಗರಿಸಿದ್ದಾರೆ. ಕಾಸರಗೋಡು ಸೈಬರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾಸರಗೋಡು: ಕುಂಬಳೆ ಸಮೀಪದ ಪಚ್ಚಂಬಳ ಸಫಾನಗರದ ತನ್ನ ಮನೆಯಲ್ಲಿ ಮಲಗಿದ್ದ ಮುಹಮ್ಮದ್(63) ಎಂಬುವರನ್ನು ಮಾತನಾಡಲಿಕ್ಕಿದೆ ಎಂದು ಕರೆದು ಎಬ್ಬಿಸಿ ಬಳಿಕ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಮುಹಮ್ಮದ್ ಅವರ ಬೊಬ್ಬೆಕೇಳಿ ಆಸುಪಾಸಿನವರು ಆಗಮಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಸಫಾ ನಗರದ ಇರ್ಷಾದ್ ಯಾನೆ ಲುಟಾಫಿ ತಲೆಮರೆಸಿಕೊಂಡಿದ್ದಾನೆ. ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಆರ್.ಪಿ.ಅನೂಪ್ಕೃಷ್ಣ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿದ್ದು, ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ. ಇರ್ಷಾದ್ ಕಾಪಾ ಪ್ರಕರಣದ ಆರೋಪಿಯಾಗಿದ್ದು ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು ತಿಳಿದುಬಂದಿದೆ.
ಕಾಸರಗೋಡು: ಕುತ್ತಿಕೋಲಿನ ಸಹಕಾರಿ ಸಂಘವೊಂದರಲ್ಲಿ 9,73,999 ರೂ. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಕರಿವೇಡಗಂ ನೆಲ್ಲಿತ್ತಾವು ನಿವಾಸಿ ಬಿ.ಉಣ್ಣಿಕೃಷ್ಣನ್(46) ಎಂಬಾತನ ವಿರುದ್ಧ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುತ್ತಿಕೋಲಿನ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಸದಸ್ಯರಾಗಿರುವ ಉಣ್ಣಿಕೃಷ್ಣನ್ ಹಣಕಾಸಿನ ಅಕ್ರಮ ಎಸಗಿರುವ ಬಗ್ಗೆ ಸಂಘದ ಕಾರ್ಯದರ್ಶಿ ಸಿ.ಅನಿಲ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಫೆಬ್ರವರಿ 18ರಿಂದ ಮಾರ್ಚ್ 18ರವರೆಗಿನ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ವಿವಿಧ ವ್ಯಕ್ತಿಗಳ ಮೂಲಕ ಹಣ ವರ್ಗಾವಣೆ ಮಾಡಿಸಿ ಹಿಂಪಡೆಯಲಾಗಿದೆ. ಇದರಿಂದ ಸಂಘದ ಖಾತೆ ಲೀನ್ ಆಗಿದ್ದು ಒಟ್ಟು 9,73,999 ರೂ. ನಷ್ಟ ಉಂಟಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.