

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪ್ರಮುಖ ನದಿಗಳು ಮಳೆಯಿಲ್ಲದೆ ಬತ್ತಿ ಹೋಗುತ್ತಿದ್ದು, ಜಿಲ್ಲಾದ್ಯಂತ ತೀವ್ರ ನೀರಿನ ಬಿಕ್ಕಟ್ಟು ಎದುರಾಗುವಂತಿದೆ. ನದಿಗಳ ಉಗಮ ಸ್ಥಾನ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ.
ಶಾಂಭವಿ, ಪಾಪನಾಶಿನಿ, ಸ್ವರ್ಣ, ಸೀತಾ ಹೀಗೆ ಹಲವು ನದಿ ಪಾತ್ರದಲ್ಲಿ ನೀರಿನ ಹರಿವಿನ ಮಟ್ಟ ಕುಸಿತವಾಗಿದ್ದು, ಮಳೆ ಪ್ರಮಾಣ ಮತ್ತಷ್ಟು ಕುಸಿತವಾದರೆ ನೀರಿನ ಸಮಸ್ಯೆ ಕಾಡಲಿದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಅಂತ್ಯದ ವೇಳೆಗೆ ನದಿ ನೀರು ಬತ್ತುವುದು ಸಾಮಾನ್ಯ. ಆದರೆ ಈ ಬಾರಿ ಆಗಸ್ಟ್ ಅಂತ್ಯಕ್ಕೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನದಿ ಮೂಲವನ್ನೇ ನಂಬಿದ ಕೃಷಿಕರು ಕಂಗಾಲಾಗಿದ್ದಾರೆ.
ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿ, ಕಾರ್ಕಳ ತಾಲೂಕಿನ ಮುಂಡ್ಲಿ ಭಾಗದಲ್ಲಿ ಹರಿಯುವ ಸ್ವರ್ಣ ನದಿ ಹಾಗೂ ಕಾರ್ಕಳದ ಸಾಣೂರು, ನಿಟ್ಟೆ, ಬೋಳ, ಮುಂಡ್ಕೂರು, ಮೂಲ್ಕಿ ಭಾಗದಲ್ಲಿ ಹರಿಯುವ ಶಾಂಭವಿ ನದಿ, ಪಳ್ಳಿ, ಸೂಡ, ಉದ್ಯಾವರ ಭಾಗದಲ್ಲಿ ಹರಿಯುವ ಪಾಪನಾಶಿನಿ ನದಿಯಲ್ಲೂ ನೀರಿನ ಮಟ್ಟ ಕಡಿಮೆಯಾಗಿ ನದಿಯಲ್ಲಿ ಮರಳು ದಿಬ್ಬಗಳು ಗೋಚರಿಸುತ್ತಿವೆ. ದ.ಕ. ಜಿಲ್ಲೆಯ ಪ್ರಮುಖ ಜೀವನಾಡಿಯಾದ ನಂದಿನಿ, ನೇತ್ರಾವತಿ ನದಿ ಪಾತ್ರದಲ್ಲೂ ನೀರಿನ ಮಟ್ಟ ಕುಸಿತವಾಗಿದೆ.
ಮಳೆಗಾಲದಿಂದ ಬೇಸಿಗೆ ಆರಂಭದವರೆಗೆ ಜೀವಕಳೆ ಕಳೆದುಕೊಳ್ಳದ ಈ ನದಿಗಳು ಪ್ರಸ್ತುತ ನೀರಿಲ್ಲದೆ ಬರಿದಾಗುತ್ತಿವೆ. ನದಿ ಪಾತ್ರದಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿರುವುದರಿಂದ, ಅಲ್ಲಲ್ಲಿ ಬೃಹತ್ ಮರಳಿನ ದಿಬ್ಬಗಳು ಮತ್ತು ಬಂಡೆಗಳು ಕಾಣಿಸುತ್ತಿವೆ. ಜಲಚರ ಜೀವಸಂಕುಲಕ್ಕೂ ಸಂಚಕಾರ ಎದುರಾಗುವಂತಾಗಿದೆ.
ನದಿ ನೀರನ್ನೇ ನಂಬಿ ಬದುಕುತ್ತಿರುವ ನೂರಾರು ರೈತರು ಸಂಕಷ್ಟ ಅನುಭವಿಸುತ್ತಿದ್ದು, ಅಡಿಕೆ, ತರಕಾರಿ ಹಾಗೂ ಭತ್ತದ ಗದ್ದೆಗಳಿಗೆ ನೀರು ಹಾಯಿಸಲು ನದಿಗಳೇ ಮುಖ್ಯ ಆಧಾರವಾಗಿವೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಹಾಗೂ ಕೃಷಿ ಉತ್ಪನ್ನಗಳು ನಾಶವಾಗುವ ಭೀತಿ ಎದುರಾಗಲಿದೆ. ನದಿಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಿಸಲು ತಾತ್ಕಾಲಿಕ ಕಿಂಡಿ ಅಣೆಕಟ್ಟುಗಳಲ್ಲಿ ಹಲಗೆಗಳನ್ನು ಅಳವಡಿಸುವುದು ಹಾಗೂ ನೀರಿನ ಮಿತಬಳಕೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯ.