ಟೆಕ್-ನೋ26 ತಾಂತ್ರಿಕ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉಡುಪಿ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಸಂಸ್ಥೆ ಸಹ ಸಂಸ್ಥಾಪಕ ಅರುಣಾಚಲ ಶೆಟ್ಟಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ, ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್ಕರ್ ಮೊದಲಾದವರಿದ್ದರು.
ಕಾರ್ಕಳ: ಕೃತಕ ಬುದ್ಧಿಮತ್ತೆ ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತದೆ ಎಂದು ದೂರುವುದರ ಬದಲು ಅದನ್ನು ಬಳಸಿಕೊಂಡು ನಮ್ಮ ಕಾರ್ಯಕ್ಷಮತೆ ಹೆಚ್ಚಿಸುವ ಕೌಶಲ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ಬೆಳವಣಿಗೆಯಿಂದ ನಮ್ಮ ಬದುಕು ಹೇಗೆ ಸುಲಭವಾಗಲಿದೆ ಎಂಬುದನ್ನು ನಾವು ಮನನ ಮಾಡಬೇಕು. ವಿಭಿನ್ನ ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಗಮನಹರಿಸಿ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಉಡುಪಿ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಸಂಸ್ಥೆ ಸಹ ಸಂಸ್ಥಾಪಕ ಅರುಣಾಚಲ ಶೆಟ್ಟಿ ಹೇಳಿದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗ ಉಡುಪಿ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಶುಕ್ರವಾರ ಟೆಕ್-ನೋ26 ತಾಂತ್ರಿಕ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ ಮಾತನಾಡಿದರು.ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿಯ ವಿವಿಧ ಶಿಕ್ಷಣ ಸಂಸ್ಥೆಗಳ 120ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂಸಿಎ ವಿಭಾಗದ ಮುಖ್ಯಸ್ಥೆ ಡಾ.ಮಮತಾ ಬಲಿಪ ಸ್ವಾಗತಿಸಿದರು. ಟೆಕ್-ನೋ26 ಸಂಯೋಜಕ ಡಾ.ಸ್ಫೂರ್ತಿ ಪಿ.ಶೆಟ್ಟಿ ಪರಿಚಯಿಸಿದರು. ಡಾ.ಮಂಗಳ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಸಾತ್ವಿಕಾ ಜೈನ್ ಕಾರ್ಯಕ್ರಮ ನಿರೂಪಿಸಿದರು.