

ವಿಜಯವಾಣಿ ಸುದ್ದಿಜಾಲ ಪುತ್ತೂರು
ಸಂಪ್ಯ ಗಣೇಶೋತ್ಸವ ಸಂದರ್ಭ ನಡೆದ ಕಾರ್ತಿಕ್ ಸುವರ್ಣ ಮೇರ್ಲ(27) ಕೊಲೆ ಪ್ರಕರಣದ ಅಪರಾಧಿಗಳಾದ ಪ್ರೀತು ಯಾನೆ ಪ್ರೀತೇಶ್ ಸುಲಾಯ ಹಾಗೂ ಕಿರಣ್ ಯಾನೆ ಮಣಿ ಎಂಬುವರಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಜೀವಾವಧಿ ಶಿಕ್ಷೆ ಹಾಗೂ ತಲಾ 3 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಚರಣ್‌ರಾಜ್‌ನನ್ನು 2022ರ ಜೂ.4ರಂದು ಪೆರ್ಲಂಪಾಡಿಯಲ್ಲಿ ತಂಡವೊಂದು ತಲವಾರ್‌ನಿಂದ ಕಡಿದು ಹತ್ಯೆ ಮಾಡಿತ್ತು. 41 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಕೇಶವ ಸುವರ್ಣ, ಪವನ್, ಶ್ರೀಕಾಂತ್ ಪ್ರತ್ಯಕ್ಷದರ್ಶಿಗಳಾಗಿದ್ದರು. ವೈಜ್ಞಾನಿಕ, ವೈದ್ಯರ ಸಾಕ್ಷೃಗಳೆಲ್ಲವೂ ಆರೋಪ ಸಾಬೀತುಪಡಿಸಲು ಪ್ರಮುಖ ಪಾತ್ರ ವಹಿಸಿದೆ. ಅಪರಾಧಿಗಳಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಸ್ಟೀವನ್ ಮೊಂತೇರೊ ಎಂಬಾತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜಯಂತಿ ಕೆ.ಸತೀಶ್ ಭಟ್ ವಾದಿಸಿದ್ದರು.
ಅಪರಾಧಿಗಳು ದಂಡ ಪಾವತಿಸಲು ವಿಫಲರಾದರೆ 3 ತಿಂಗಳು ಸಾಧಾರಣ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ದಂಡದ ಮೊತ್ತದಲ್ಲಿ 5.90 ಲಕ್ಷ ರೂ. ಅನ್ನು ಕಾರ್ತಿಕ್ ಸುವರ್ಣ ತಾಯಿ ಹೇಮಾವತಿ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಕಾರ್ತಿಕ್ ಮೇಲೆ ಚರಣ್‌ರಾಜ್‌ಗೆ ಪೂರ್ವದ್ವೇಷವಿತ್ತು. 2019 ಸೆ.3ರಂದು ರಾತ್ರಿ ಗಣೇಶೋತ್ಸವ ಶೋಭಾಯಾತ್ರೆ ಸಂದರ್ಭ ಯಕ್ಷಗಾನ ನಡೆಯುತ್ತಿದ್ದಲ್ಲಿ ಕಾರ್ತಿಕ್ ಒಬ್ಬನೇ ಇರುವುದನ್ನು ಗಮನಿಸಿದ ಚರಣ್‌ರಾಜ್ ಹಾಗೂ ಕಿರಣ್ ಹಿಂದಿನಿಂದ ಕಾರ್ತಿಕ್ ಕೈಗಳನ್ನು ಗಟ್ಟಿಯಾಗಿ ಹಿಡಿದು ಪ್ರೀತೇಶ್‌ಗೆ ಕೊಲ್ಲಲು ಸೂಚನೆ ನೀಡಿದ್ದರು. ಅದರಂತೆ ಪ್ರೀತೇಶ್ ತಲವಾರ್‌ನಿಂದ ಕಾರ್ತಿಕ್ ಎದೆಗೆ ತಿವಿದಿದ್ದನು. ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರ್ತಿಕ್ ಮೃತಪಟ್ಟಿದ್ದರು.
ಕಾರ್ತಿಕ್ ಮೇರ್ಲ ಪ್ರಕರಣದ ವಿಚಾರಣೆ ಹಳೇ ನ್ಯಾಯಾಲಯದಲ್ಲೇ ಮುಗಿದು, ನ್ಯಾಯಾಧೀಶರ ವರ್ಗಾವಣೆಯಿಂದ ಆದೇಶ ಪ್ರಕಟಣೆ ವಿಳಂಬವಾಗಿತ್ತು. ಪುತ್ತೂರು ನ್ಯಾಯಾಲಯ ಸಂಕೀರ್ಣ ಆನೆಮಜಲುವಿಗೆ ಸ್ಥಳಾಂತರಗೊಂಡ ಬಳಿಕ ಜೀವಾವಧಿ ಶಿಕ್ಷೆ ಪ್ರಕಟವಾದ ಮೊದಲ ಪ್ರಕರಣವಾಗಿದೆ.