ಮಂಗಳೂರು: ನಗರದ ಹೊರ ಭಾಗದಲ್ಲಿ ಓಡಾಡುತ್ತಿದ್ದ ಚಿರತೆ ಈಗ ನಗರದೊಳಗೂ ಬಂದಿದೆ. ಕದ್ರಿಯ ಡಾಕ್ಟರ್ಸ್ ಲೇನ್ ನಲ್ಲಿ ಸೋಮವಾರ ರಾತ್ರಿ ಚಿರತೆ ಓಡಾಟ ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು.
ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದು, ಕೈಬಟ್ಟಲು ಪ್ರದೇಶದ 7ನೇ ಕ್ರಾಸ್ ಮುಂಭಾಗದ ನಾಗಬನದ ಹಿಂಭಾಗದಲ್ಲಿ ಬೋನ್ ಇರಿಸಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಬೋನ್ ನ ಜತೆ ಮತ್ತೊಂದು ಗೂಡಿನಲ್ಲಿ ಎರಡು ಕೋಳಿಗಳನ್ನು ಇರಿಸಲಾಗಿದೆ. ಇದಲ್ಲದೆ ಅರಣ್ಯ ಇಲಾಖೆಯ ಸಿಬಂದಿಗಳನ್ನು 3 ಬ್ಯಾಚ್ ಗಳನ್ನಾಗಿ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಚಿರತೆ ಓಡಾಟ ನಡೆಸುವುದಿಲ್ಲ. ರಾತ್ರಿ ವೇಳೆಯಲ್ಲಿ ಅಡ್ಡಾಡುವ ಚಿರತೆ ಸೆರೆಗೆ ಕ್ರಮವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್‌ನಿಂದ ಫೆಬ್ರವರಿ ತನಕ ಚಿರತೆಗಳ ಸಂತಾನಾಭಿವೃದ್ಧಿ ಸಮಯವಾಗಿದ್ದು, ಈ ಸಂದರ್ಭ ಹೆಚ್ಚು ಓಡಾಡುತ್ತವೆ. ನಾಡಿಗೆ ಚಿರತೆಗಳು ಪ್ರವೇಶ ಮಾಡಿದರೆ ನಿಂತಲ್ಲೇ ನಿಲ್ಲುವುದಿಲ್ಲ. ಸುಲಭವಾಗಿ ಕೋಳಿ ತ್ಯಾಜ್ಯ, ನಾಯಿಗಳು ಕಂಡು ಬಂದರೆ ಅಲ್ಲಿ ವಾಸ್ತವ್ಯ ಹೂಡಲು ಪ್ರಯತ್ನಿಸುತ್ತವೆ. ಆದ್ದರಿಂದ ಎಲ್ಲೆಂದರಲ್ಲಿ ಮಾಂಸ ತ್ಯಾಜ್ಯ ಎಸೆಯಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರುಮಾರ್ಗ, ಬಜಪೆ, ಎಡಪದವು ಪರಿಸರದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದೆ. ಅಲ್ಲಿಂದಲೇ ಆಹಾರ ಹುಡುಕಿಕೊಂಡು ನಗರ ಪ್ರವೇಶಿಸಿರಬಹುದು. ಒಂದು ರಾತ್ರಿ 15ರಿಂದ 20 ಕಿ.ಮೀ. ಓಡಾಡುತ್ತವೆ. ಚಿರತೆಯ ಭಯ ಬೇಡ, ಎಚ್ಚರಿಕೆ ಇರಲಿ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.