

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರತಿಕೂಲ ಪರಿಸ್ಥಿತಿಗಳನ್ನು ಹಿಮ್ಮೆಟ್ಟಿಸಿ ಸವಾಲುಗಳನ್ನು ಎದುರಿಸಿ ಮುನ್ನಡೆಯುವುದರಲ್ಲಿ ನಾಯಕತ್ವದ ಸಾಮರ್ಥ್ಯ ಅಡಗಿದೆ. ಪ್ರಸ್ತುತ ದಿನಗಳಲ್ಲಿ ಪದವೀಧರರು ಜಾಗತಿಕವಾಗಿ ಅತ್ಯಂತ ಮಹತ್ವದ ಹಾಗೂ ಸವಾಲಿನ ಕಾಲಘಟ್ಟದಲ್ಲಿ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಮಣಿಪಾಲ ಟಿಎಪಿಎಂಐ ನಿರ್ದೇಶಕ ಡಾ.ದೇಬಾಶಿಸ್ ಪ್ರಧಾನ್ ಹೇಳಿದರು.
ದೇರಳಕಟ್ಟೆಯ ಯೆಂಡ್ಯೂರೆನ್ಸ್ ಝೋನ್‌ನಲ್ಲಿ ಶುಕ್ರವಾರ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಘಟಕ ಸಂಸ್ಥೆ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ 7ನೇ ಪದವಿ ಪ್ರದಾನ ಸಮಾರಂಭದ ದ್ವಿತೀಯ ದಿನದ ಸಮಾರಂಭದಲ್ಲಿ ಮಾತನಾಡಿದರು.
ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ ಅಧ್ಯಕ್ಷತೆ ವಹಿಸಿ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೃತಕ ಬುದ್ಧಿಮತ್ತೆಯ ಕೌಶಲಗಳನ್ನು ಮೈಗೂಡಿಸಿಕೊಳ್ಳದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿಯುವ ಆತಂಕ ಇರುವುದರಿಂದ ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಕೌಶಲಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಬೇಕು ಎಂದರು.
ಬಿಬಿಎ ಮತ್ತು ಬಿ.ಕಾಂ ವಿಭಾಗಗಳ 724 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಯೆನೆಪೋಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ.ನೀಕ್ಷಿತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಬರ್ಡ್ ಸಂಸ್ಥೆಯ ಜಂಟಿ ನಿರ್ದೇಶಕ ವಿ.ರಾಜಾರಾಮನ್, ಸಂಸ್ಥೆಯ ಪ್ರಾಂಶುಪಾಲ ಪ್ರೊ.ಜೀವನ್ ರಾಜ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ಪ್ರೊ.ಶರೀನಾ ಪಿ.ಸ್ವಾಗತಿಸಿದರು. ಉಪಪ್ರಾಂಶುಪಾಲ ನಾರಾಯಣ ಸುಕುಮಾರ್ ಎ.ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಿಯಾ, ನಿರ್ವಹಣಾ ವಿಭಾಗದ ಉಪನ್ಯಾಸಕಿ ಚರಿತ್ರಾ ಎಂ.ವಿ., ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಹನಾ ಎಂ.ಹಾಗೂ ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ಪೂಜಾ ನಿರೂಪಿಸಿದರು.