ಮೂಡುಬಿದಿರೆ: ನಾಯಕ ಎಂದರೆ ತನ್ನನ್ನು ತಾನು ಕೊನೆಯ ಸ್ಥಾನದಲ್ಲಿ ಇಟ್ಟುಕೊಳ್ಳುವವನು. ಸ್ವಾರ್ಥ ತ್ಯಜಿಸಿ ದೇಶದ ಹಿತಕ್ಕೆ ಮೊದಲ ಆದ್ಯತೆ ನೀಡುವ ಮನಸ್ಥಿತಿಯೇ ನಿಜವಾದ ನಾಯಕತ್ವ. ಯುವಶಕ್ತಿಯಿಂದಲೇ ವಿಕಸಿತ ಭಾರತ ನಿರ್ಮಾಣ ಸಾಧ್ಯ ಎಂದು ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ನಿರ್ಮಾಣಕ್ಕಾಗಿ ನಾಯಕತ್ವ ಶಿಬಿರ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತರಾಗದೆ ಸಮಾಜಮುಖಿ ಚಿಂತನೆಯೊಂದಿಗೆ ರಾಷ್ಟ್ರ ಸೇವೆಗೆ ಮುಂದಾಗಬೇಕು. ವಿಶ್ವದಲ್ಲೇ ಅತಿದೊಡ್ಡ ಯುವಜನಸಂಖ್ಯೆ ಹೊಂದಿರುವ ಭಾರತಕ್ಕೆ ಸೂಕ್ತ ಮಾರ್ಗದರ್ಶನ ಇಲ್ಲದಿದ್ದರೆ ಯುವಶಕ್ತಿ ದಾರಿ ತಪ್ಪುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದರು.
ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿದರು. ವಿಧಾನಮಂಡಲದ ಪಾತ್ರ ಮತ್ತು ಸಂವಿಧಾನಾತ್ಮಕ ಆದರ್ಶಗಳು, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣ, ಮಾಧ್ಯಮದ ಜವಾಬ್ದಾರಿ ಕುರಿತು ಕಿಮ್ಮನೆ ರತ್ನಾಕರ್, ರಾಮಚಂದ್ರ ಮಿಜಾರ್, ಡಿಐಎಸ್‌ಪಿ ಅಬ್ದುಲ್ ಅಹದ್, ಐಐಎಸ್‌ಸಿ ಆರ್ಗ್ಯಾನಿಕ್ ನ್ಯಾನೋ ಎಲೆಕ್ಟ್ರಾನಿಕ್ಸ್ ಗ್ರೂಪಿನ ವಿಜ್ಞಾನಿ ಪ್ರವೀಣ್ ಸಿ.ರಾಮಮೂರ್ತಿ ಹಾಗೂ ಅಂಕಣಕಾರ ಪ್ರೊ.ಪ್ರೇಮಶೇಖರ ಉಪನ್ಯಾಸ ನೀಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ, ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಭಾವೈಕ್ಯ ಶಿಬಿರದ ಸಹಾಯಕ ನಿರ್ದೇಶಕ ಜನಾರ್ದನ ಚಕ್ರವರ್ತಿ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ನಿಯತಿ ಎನ್.ಅಮಿನ್ ನಿರೂಪಿಸಿದರು, ಫೆನಿಲ್ಡಾ ಮರಿಯಾ ವರ್ಗೀಸ್ ವಂದಿಸಿದರು.