ಗರ್ಭಿಣಿಯ ಪ್ರಾಣ ಉಳಿಸಿದ ಲೇಡಿಗೋಷನ್ ಮಲ್ಟಿಡಿಸಿಪ್ಲಿನರಿ ತಂಡ

 ಲೇಡಿಗೋಷನ್
ಲೇಡಿಗೋಷನ್
Published on

ಮಂಗಳೂರು: ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ 28 ವಾರಗಳ ಗರ್ಭಿಣಿಯೊಬ್ಬರ ಪ್ರಾಣವನ್ನು ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಮಲ್ಟಿಡಿಸಿಪ್ಲಿನರಿ ಚಿಕಿತ್ಸಾ ವಿಧಾನದಿಂದ ಉಳಿಸಿದೆ.

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಏಳು ತಿಂಗಳ ಗರ್ಭಿಣಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕಳುಹಿಸಿದರು. ಪರೀಕ್ಷೆಯಲ್ಲಿ ಹೊಟ್ಟೆಯೊಳಗೆ ಭಾರೀ ರಕ್ತಸ್ರಾವವಾಗಿದ್ದು, ಹಿಮೋಗ್ಲೋಬಿನ್ ಮಟ್ಟ ಕೇವಲ 6 ಗ್ರಾಂಗೆ ಇಳಿದಿರುವುದು ಪತ್ತೆಯಾಯಿತು.
ತಜ್ಞ ವೈದ್ಯರು ರೋಗಿಯೊಂದಿಗೆ ಅಂಬುಲೆನ್ಸ್‌ನಲ್ಲಿ ತೆರಳಿ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ತುರ್ತು ಎಂಆರ್‌ಐ ಪರೀಕ್ಷೆ ನಡೆಸಿದರು. ಹಿಂದಿನ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯ ಗಾಯದ ಸ್ಥಳದಲ್ಲಿ ಗರ್ಭಕೋಶ ಒಡೆದು ರಕ್ತಸ್ರಾವವಾಗಿರುವುದು ಹಾಗೂ ಪ್ಲಾಸೆಂಟಾ ಪರ್ಕ್ರೀಟಾ ಎಂಬ ಗಂಭೀರ ಸಮಸ್ಯೆ ಇರುವುದು ಪತ್ತೆಯಾಯಿತು. ಪ್ಲಾಸೆಂಟಾ ಗರ್ಭಾಶಯವನ್ನು ಮೀರಿ ಮೂತ್ರಕೋಶದ ಭಾಗಕ್ಕೂ ವ್ಯಾಪಿಸಿದ್ದರಿಂದ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿತ್ತು.
ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಅವರ ಮಾರ್ಗದರ್ಶನದಲ್ಲಿ ಸ್ತ್ರೀ ರೋಗ, ಮೂತ್ರರೋಗ, ಜನರಲ್ ಸರ್ಜರಿ ಹಾಗೂ ಅರಿವಳಿಕೆ ತಜ್ಞರನ್ನೊಳಗೊಂಡ ತಂಡ ಮುನ್ನೆಚ್ಚರಿಕೆಯಿಂದ ರಕ್ತದ ಘಟಕಗಳನ್ನು ಸಿದ್ಧಪಡಿಸಿಕೊಂಡು ಶಸ್ತ್ರ ಚಿಕಿತ್ಸೆ ನಡೆಸಿತು. ಬೆಳಗ್ಗೆ 5ರಿಂದ 9ರವರೆಗೆ ನಡೆದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು.
ಕೆಎಂಸಿಯ ತಜ್ಞರು, ಲೇಡಿಗೋಷನ್ ವೈದ್ಯರು, ಶುಶ್ರೂಷಕ ಸಿಬ್ಬಂದಿ ಹಾಗೂ ಅಂಬುಲೆನ್ಸ್ ಚಾಲಕರ ಸಂಘಟಿತ ಸೇವೆ ಪ್ರಕರಣದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಸರ್ಕಾರಿ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಹ ಈ ಘಟನೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net