

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಭಾಷೆ ಸಂಸ್ಕೃತಿಯ ಪ್ರತೀಕ. ಭಾಷೆ ಕೇವಲ ಸಂವಹನ ಮಾಧ್ಯಮವಾಗಿರದೆ ಸಂಸ್ಕಾರದ ಜ್ಞಾನ ನೀಡುವ ಆಕರ. ಭಾಷೆಯನ್ನು ಉಳಿಸಿ ಬೆಳೆಸಲು ಮಕ್ಕಳ ಪಾತ್ರ ಅತಿ ಮುಖ್ಯ. ಯುವ ಜನಾಂಗ ಭಾಷಾ ಪ್ರೇಮ ಬೆಳೆಸಿಕೊಂಡು ಅದರ ಔನತ್ಯಕ್ಕೆ ಬುನಾದಿಯಾಗಬೇಕು ಎಂದು ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇಲಾಖೆ ಸಹಯೋಗದೊಂದಿಗೆ ಆಂತರಿಕ ಗುಣಮಟ್ಟ ಭರವಸಾಕೋಶದಡಿ ಅರೆಭಾಷೆ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಡಾ.ದಿನೇಶ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅರೆಭಾಷೆಯ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಪ್ರಮುಖರಾದ ಡಾ.ವಿಶ್ವನಾಥ ಬದಿಕಾನ, ಡಾ.ರಾಘವ ಗೌಡ ಗುಡ್ಡೆಮನೆ, ಎಸ್‌ಎಸ್‌ಪಿಯು ಕಾಲೇಜಿನ ಅರೆಭಾಷೆ ಸಂಘದ ಸಂಯೋಜಕಿ ಸೌಮ್ಯಾ ದಿನೇಶ್, ಕೆಎಸ್‌ಎಸ್ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಲತಾ ಬಿ.ಟಿ. ಇದ್ದರು.
ಸ್ಪರ್ಧೆಗಳು: ಅರೆಭಾಷೆ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಅರೆಭಾಷೆ ಹಾಡು, ನೃತ್ಯ, ವೀಳ್ಯ ಶಾಸ್ತ್ರದ ಒಕ್ಕಣೆ, ಶೋಭಾನೆ, ಗೋಡೆ ಹಸೆ ಬರೆಯುವ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೆಎಸ್‌ಎಸ್ ಕಾಲೇಜಿನ ಅರೆಭಾಷೆ ಸಂಘದ ಸಂಯೋಜಕಿ ಸುಮಿತ್ರಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಖ್ಯಾ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಸ್ನೇಹಲ್ ವಂದಿಸಿದರು.