ಕೃಷ್ಣನ ಸಂದೇಶ ಸಾರ್ವಕಾಲಿಕ: ಶಾಸಕ ವೇದವ್ಯಾಸ ಕಾಮತ್

  ಪುರಭವನದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಚಿತ್ರದಲ್ಲಿ ಶಾಲೇಟ್ ಪಿಂಟೋ, ತಾರನಾಥ್ ಗಟ್ಟಿ ಕಾಪಿಕಾಡ್ ಮತ್ತು ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿರುವುದು.
ಪುರಭವನದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಚಿತ್ರದಲ್ಲಿ ಶಾಲೇಟ್ ಪಿಂಟೋ, ತಾರನಾಥ್ ಗಟ್ಟಿ ಕಾಪಿಕಾಡ್ ಮತ್ತು ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪುರಭವನದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ
ಮಂಗಳೂರು: ಮನುಕುಲದ ನೆಮ್ಮದಿ ಮತ್ತು ಉದ್ಧಾರಕ್ಕಾಗಿ ಭಗವಾನ್ ಶ್ರೀಕೃಷ್ಣ ನೀಡಿದ ಸಂದೇಶವು ಜಗತ್ತಿಗೆ ಸಾರ್ವಕಾಲಿಕವಾಗಿದ್ದು, ಇದನ್ನು ಪ್ರತಿಯೊಬ್ಬರೂ ಸದಾ ಪಾಲಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕುದುಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ಶ್ರೀಕೃಷ್ಣ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದವರಲ್ಲ. ಕೃಷ್ಣನ ಚಿಂತನೆಗಳು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಸ್ತುತ. ಸತ್ಯ ಮತ್ತು ನ್ಯಾಯಕ್ಕೆ ಸದಾ ನಿಷ್ಠುರವಾಗಿದ್ದ ಕೃಷ್ಣನ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ," ಎಂದು ಅವರು ತಿಳಿಸಿದರು.
ಕರಾವಳಿಯಾದ್ಯಂತ ನಡೆಯುತ್ತಿರುವ ಕೃಷ್ಣ ಜನ್ಮಾಷ್ಟಮಿ ಆಚರಣೆಗಳು ಪ್ರತಿಯೊಂದು ಮನೆಯಲ್ಲೂ ಸಂತಸ ಮೂಡಿಸುತ್ತಿವೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಶ್ರೀಕೃಷ್ಣ ಜಯಂತಿಯನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಆಚರಣೆಗೆ ಹೆಚ್ಚಿನ ಮೆರುಗು ನೀಡಬೇಕು ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೇಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಿರೆಡ್ಡಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ಆರ್. ಕುಮಾರಸ್ವಾಮಿ, ಕಾರ್ಯದರ್ಶಿ ಸದಾನಂದ ಕಾಮೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಭಟ್ ಗಾಳಿಮನೆ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಬಳಿಕ ಶ್ರೀಕೃಷ್ಣನ ಸಂದೇಶಗಳನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net