

ಮಂಗಳೂರು: ಕೇರಳದ ಅಬಕಾರಿ ಹಾಗೂ ಸಹಕಾರ ಸಚಿವ ಎಂ.ಲಿಜು ಅವರು ಕುಟುಂಬ ಸಮೇತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿ, ನಾರಾಯಣಗುರು, ಗೋಕರ್ಣನಾಥ ಸೇರಿದಂತೆ ಪರಿವಾರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಎಂ.ಲಿಜು ಅವರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಶ್ರೀ ನಾರಾಯಣಗುರುಗಳ ದಿವ್ಯಹಸ್ತದಿಂದ ಪ್ರತಿಷ್ಠಾಪನೆಯಾದ ಕ್ಷೇತ್ರವಾಗಿದ್ದು, ಬೇಡಿದವರಿಗೆ ವರ ಕೊಡುವ ಶಕ್ತಿ ಕೇಂದ್ರವಾಗಿದೆ. ನಾನು ಚುನಾವಣೆಗೆ ನಿಲ್ಲುವ ಮೊದಲೇ ಈ ಕ್ಷೇತ್ರಕ್ಕೆ ಬಂದು ವಿಶೇಷ ಪ್ರಾರ್ಥನೆ ಮಾಡಿ ಹೋಗಿದ್ದೆ. ಆ ಬಳಿಕ ಚುನಾವಣೆಯಲ್ಲಿ ಗೆದ್ದು ನಮ್ಮ ಸರ್ಕಾರ ಬಂದು ಸಚಿವನಾಗುವ ಅವಕಾಶ ಸಿಕ್ಕಿತು. ಇದು ನಿಜಕ್ಕೂ ದೇವರು, ಗುರುಗಳ ಅನುಗ್ರಹದಿಂದ ಸಾಧ್ಯವಾಗಿದ್ದು, ಆ ಹಿನ್ನಲೆಯಲ್ಲಿ ಕುಟುಂಬ ಸಮೇತನಾಗಿ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಿದ್ದೇನೆ ಎಂದರು.
ಈ ಸಂದರ್ಭ ಕುದ್ರೋಳಿ ಶ್ರೀ ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು. ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರ್, ಕೋಶಾಧಿಕಾರಿ ಪದ್ಮರಾಜ್ ಆರ್., ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ರಾಧಾಕೃಷ್ಣ, ಸಚಿವರ ಪತ್ನಿ ಅಂಬಲಿ ಲಿಜು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಚಿಲಿಂಬಿ, ಗೋಕರ್ಣನಾಥ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ಯೋಗೀಶ್ ಕೋಟ್ಯಾನ್ ಮೂಲ್ಕಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.