ಕಯ್ಯರ ಸ್ಮಾರಕ ಜಾಗ ಕಾಡುಪಾಲು

ಜಿಪಂಗೆ 30 ಸೆಂಟ್ಸ್ ಭೂಮಿ ಹಸ್ತಾಂತರಿಸಿದ್ದ ಕುಟುಂಬ
ಡಾ.ಕಯ್ಯರ ಕಿಞ್ಞಣ್ಣ ರೈ ಕುಟುಂಬ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿರುವ ಜಾಗ ಕಾಡುಬೆಳೆದು ಪಾಳುಬಿದ್ದಿದೆ
ಡಾ.ಕಯ್ಯರ ಕಿಞ್ಞಣ್ಣ ರೈ ಕುಟುಂಬ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿರುವ ಜಾಗ ಕಾಡುಬೆಳೆದು ಪಾಳುಬಿದ್ದಿದೆ
Published on: 

ಪುರುಷೋತ್ತಮ ಪೆರ್ಲ ಕಾಸರಗೋಡು

ನಾಡುಕಂಡ ಶ್ರೇಷ್ಠ ಸಾಹಿತಿ, ನಾಡೋಜ ಡಾ.ಕಯ್ಯರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಸ್ಮಾರಕ ಕೇಂದ್ರ ನಿರ್ಮಾಣಕ್ಕಾಗಿ ಡಾ.ಕಯ್ಯರ ಕಿಞ್ಞಣ್ಣ ರೈ ಕುಟುಂಬ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿರುವ ಜಾಗ ಕಾಡುಬೆಳೆದು ಪಾಳುಬಿದ್ದಿದೆ.

ಕವಿ ಕಯ್ಯರರ ಹೆಸರಲ್ಲಿ ಸ್ಮಾರಕ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದಿಯಡ್ಕ ಸಮೀಪದ ಪೆರಡಾಲ ಕವಿತಾ ಕುಟೀರದ ಬಳಿಯಿರುವ ಸುಮಾರು 30 ಸೆಂಟ್ಸ್ ಜಾಗವನ್ನು ಕಯ್ಯರ ಕುಟುಂಬದವರು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿ ಎಂಟು ವರ್ಷ ಕಳೆದರೂ ಯಾವುದೇ ನಿರ್ಮಾಣಕಾರ್ಯ ಆರಂಭವಾಗಿಲ್ಲ. ಈ ಹಿಂದೆ ಸಮಾಜಸೇವಕ ವಕೀಲ ಕೆ.ಶ್ರೀಕಾಂತ್ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅವಧಿಯಲ್ಲಿ ಡಾ.ಕಯ್ಯರರ ಹೆಸರಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಶ್ರಮಿಸಿದ್ದರು.

ಈ ಮಧ್ಯೆ ಕವಿತಾ ಕುಟೀರ ಸಮೀಪದ ಕಲ್ಲಕಳಯ ಬತ್ತೇರಿಯಲ್ಲಿ ಡಾ.ಕಯ್ಯರ ಕುಟುಂಬದವರು ಉದಾರವಾಗಿ ನೀಡಿರುವ 31 ಸೆಂಟ್ಸ್ ಜಾಗದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.

ಜಾಗ ವಾಪಸ್ ಕೊಡಿ!: ಎಂಟು ವರ್ಷಗಳ ಹಿಂದೆ ಸ್ಮಾರಕ ನಿರ್ಮಾಣಕ್ಕಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಜಾಗ ಹಸ್ತಾಂತರಿಸಿದ್ದರೂ, ಇದುವರೆಗೆ ಸ್ಮಾರಕ ನಿರ್ಮಾಣಕಾರ್ಯ ಕೈಗೆತ್ತಿಕೊಳ್ಳದಿರುವ ಬಗ್ಗೆ ಡಾ.ಕಯ್ಯರ ಕುಟುಂಬದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಎಸ್.ಸೋಮಶೇಖರ್ ಜಿಪಂ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸ್ಮಾರಕ ನಿರ್ಮಾಣ ಕಾರ್ಯಗಳ ಬಗ್ಗೆ ಆಡಳಿತ ಸಮಿತಿಯ ಗಮನಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ತೀರ್ಮಾನಿಸಿತ್ತು. ಸ್ಮಾರಕ ನಿರ್ಮಣ ಅಸಾಧ್ಯವಾಗಿದ್ದಲ್ಲಿ ಪಡೆದಿರುವ ಜಾಗ ವಾಪಸ್ ಕೊಡಿ ಎಂದು ಕುಟುಂಬಸ್ಥರು ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದ್ದಾರೆ.

ನಿಯೋಗ ಭೇಟಿ

ನಾಡೋಜ ಡಾ.ಕಯ್ಯರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಜಿಪಂಗೆ ಹಸ್ತಾಂತರಿಸಿರುವ ಜಾಗಕ್ಕೆ ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿತು. ಪೆರಡಾಲ ಕವಿತಾ ಕುಟೀರ ಸಮೀಪದ ನಿಯೋಜಿತ ಜಾಗದಲ್ಲಿ ಸಂಪೂರ್ಣ ಕಾಡು ಆವರಿಸಿದ್ದು, ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಯೋಗ ಸದಸ್ಯರು ತಿಳಿಸಿದರು. ಈ ಬಗ್ಗೆ ಸಮಾಲೋಚನೆ ನಡೆಸಿ ಸಮಗ್ರ ವರದಿ ತಯಾರಿಸಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ನಿಯೋಗ ಸದಸ್ಯರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರಾದ ಮನು ಎಂ, ಇರ್ಫಾನಾ ಇಕ್ಬಾಲ್, ಜಿಪಂ ಸದಸ್ಯರಾದ ಸುಭೀಶ್, ಹರ್ಷಾದ್ ವರ್ಕಾಡಿ, ಜೆ.ಎಸ್.ಸೋಮಶೇಖರ್, ರಾಮಪ್ಪ ಮಂಜೇಶ್ವರ, ಜಿಪಂ ಕಾರ್ಯದರ್ಶಿ ಬಿಜು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಟಿ.ಶಂಕರನಾರಾಯಣ ಭಟ್, ಶ್ಯಾಮ ಆಳ್ವ, ಡಾ.ಕಯ್ಯರ ಅವರ ಪುತ್ರರಾದ ದುರ್ಗಾಪ್ರಸಾದ್ ರೈ, ರಂಗನಾಥ್, ರವಿರಾಜ್ ಉಪಸ್ಥಿತರಿದ್ದರು.

ಜಾಗ ವಶಕ್ಕೆ ಪಡೆದುಕೊಂಡು ಸ್ಮಾರಕ ನಿರ್ಮಿಸದಿರುವುದು ಶ್ರೇಷ್ಠ ಕವಿಗೆ ಮಾಡಿದ ಅಪಚಾರವಾಗಿದೆ. ಸುಸಜ್ಜಿತ ಸ್ಮಾರಕ ನಿರ್ಮಾಣಕಾರ್ಯ ನಮ್ಮೆಲ್ಲರ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಜಾಗ ಬಿಟ್ಟುಕೊಡಲಾಗಿದೆ. ಜಿಲ್ಲಾ ಪಂಚಾಯಿತಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು.
ಡಾ.ಪ್ರಸನ್ನ ರೈ, ಕಯ್ಯರ ಅವರ ಪುತ್ರ