ಕರ್ಣಾಟಕ ಬ್ಯಾಂಕ್ 319.12 ಕೋಟಿ ರೂ. ನಿವ್ವಳ ಲಾಭ

ಸಿಇಒ ರಾಘವೇಂದ್ರ ಎಸ್. ಭಟ್
ಸಿಇಒ ರಾಘವೇಂದ್ರ ಎಸ್. ಭಟ್
Published on
ಮಂಗಳೂರು: ಕರ್ಣಾಟಕ ಬ್ಯಾಂಕ್ ಸೆಪ್ಟೆಂಬರ್ (2025) ತಿಂಗಳಾಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ 319.12 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಜೂನ್‌ಗೆ ಕೊನೆಗೊಂಡ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ (292.40 ಕೋಟಿ ರೂ.) ಶೇ. 9.1ರಷ್ಟು ಏರಿಕೆ ದಾಖಲಿಸಿದೆ.
ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಲಾಯಿತು.
ಸೆಪ್ಟೆಂಬರ್‌ಗೆ ಕೊನೆಗೊಂಡ ಅರ್ಧ ವರ್ಷದಲ್ಲಿ ನಿವ್ವಳ ಲಾಭವು 611.52 ಕೋಟಿ ರೂ. ಆಗಿದೆ. ಸೆಪ್ಟೆಂಬರ್ 2024ಕ್ಕೆ ಕೊನೆಗೊಂಡ ಅರ್ಧ ವರ್ಷದಲ್ಲಿ ನಿವ್ವಳ ಲಾಭ 736.40 ಕೋಟಿ ರೂ. ಆಗಿತ್ತು.
2025-26ನೇ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ 1,76,461.34 ಕೋಟಿ ರೂ. ಆಗಿದ್ದರೆ, ಮೊದಲ ತ್ರೈಮಾಸಿಕದಲ್ಲಿ 1,77,509.19 ಕೋಟಿ ರೂ. ಇತ್ತು. ದ್ವಿತೀಯ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಠೇವಣಿ 1,02,817.19 ಕೋಟಿ ರೂ. ಆಗಿದ್ದರೆ, ಮೊದಲ ತ್ರೈ ಮಾಸಿಕದಲ್ಲಿ 1,03,242.17 ಕೋಟಿ ರೂ. ಇತ್ತು. ಬ್ಯಾಂಕಿನ ಒಟ್ಟು ಮುಂಗಡ ದ್ವಿತೀಯ ತ್ರೈಮಾಸಿಕದಲ್ಲಿ 73,644.15 ಕೋಟಿ ರೂ. ಇದ್ದರೆ, ಮೊದಲ ತ್ರೈಮಾಸಿಕದಲ್ಲಿ 74,267.02 ಕೋಟಿ ರೂ. ಆಗಿತ್ತು. ಆದರೂ ಬ್ಯಾಂಕಿನ ಆರ್.ಎ.ಎಂ. (ಚಿಲ್ಲರೆ ವ್ಯಾಪಾರ, ಕೃಷಿ ಮತ್ತು ಎಂಎಸ್‌ಎಂಇ) ವಿಭಾಗದಲ್ಲಿ ಬೆಳವಣಿಗೆ ಕಂಡು ಬಂದಿದೆ. ಬ್ಯಾಂಕಿನ ಸಿ.ಡಿ. ಅನುಪಾತ ಒಟ್ಟು ಶೇ. 71.63ರಷ್ಟಿದೆ.
ಬ್ಯಾಂಕಿನ ಬಂಡವಾಳ ಅನುಪಾತವು ಜೂನ್-2025 ತ್ರೈಮಾಸಿಕ (ಶೇ.20.46)ಕ್ಕೆ ಹೋಲಿಸಿದರೆ ದ್ವಿತೀಯ ತ್ರೈಮಾಸಿಕದಲ್ಲಿ ಶೇ.20.84ಕ್ಕೇರಿದೆ. ಲಿಕ್ವಿಡಿಟಿ ಕವರೇಜ್ ಅನುಪಾತ (ಎಲ್‌ಸಿಆರ್) ಕುರಿತು ಆರ್‌ಬಿಐನ ಪರಿಷ್ಕೃತ ಕರಡು ಮಾರ್ಗಸೂಚಿಗಳಿಗೆ ಅನುಗುಣವಾಗಿ ಬ್ಯಾಂಕ್ 2025 ಸೆಪ್ಟೆಂಬರ್ 30 ರಂದು ಇದ್ದಂತೆಯೇ ಲೆಕ್ಕಾಚಾರ ಮಾಡಿದ್ದು, ಇದು ಶೇ. 188.16ರಷ್ಟಿದೆ.
ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 2025-26ರ ಎರಡನೇ ತ್ರೈಮಾಸಿಕದ ಫಲಿತಾಂಶಗಳನ್ನು ಪ್ರಕಟಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್, ಈ ತ್ರೈಮಾಸಿಕದಲ್ಲಿ, ಬ್ಯಾಂಕ್ ಉನ್ನತ ಮಟ್ಟದ ಕಾರ್ಯಕ್ಷಮತೆಯ ನಡುವೆಯೂ ಅಲ್ಪ ಪ್ರಮಾಣದ ಕುಸಿತವನ್ನು ಕಂಡಿತು. ಆದರೆ ಆಸ್ತಿ ಗುಣಮಟ್ಟದಲ್ಲಿ ಸುಧಾರಣೆ ಸಾಧಿಸಲಾಗಿದೆ. ಕಡಿಮೆ ವೆಚ್ಚದ ಠೇವಣಿಗಳ ನೆಲೆಯನ್ನು ಬಲಪಡಿಸುವ ಜತೆಗೆ ಚಿಲ್ಲರೆ ವ್ಯಾಪಾರ, ಕೃಷಿ ಮತ್ತು ಎಂಎಸ್‌ಎಂಇ ವಿಭಾಗಗಳ ಮೇಲೆ ನಮ್ಮ ಗಮನ ಮುಂದುವರಿಯಲಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net