ಇಂಗ್ಲೆಂಡ್ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಕನ್ನಡಿಗ ಕುಮಾರ್

 ಕುಮಾರ್ ಕುಂಟಿಕಾನ ಮಠ
ಕುಮಾರ್ ಕುಂಟಿಕಾನ ಮಠ
Published on

ಪ್ರಮುಖ ಮುಖ್ಯಾಂಶಗಳು

  • ಫೀಟ್ ನಗರಸಭೆಯಲ್ಲಿ ಹ್ಯಾಟ್ರಿಕ್ ಗೆಲುವು
  • ಕಾಸರಗೋಡಿನ ಕುಮಾರ್ ಕುಂಟಿಕಾನಮಠ ಸಾಧನೆ
ಬದಿಯಡ್ಕ: ಇಂಗ್ಲೆಂಡ್‌ನ ಹ್ಯಾಂಪ್‌ಶೈರ್ ಕೌಂಟಿಯ ಪ್ಲೇಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನ ಮಠ ಹ್ಯಾಟ್ರಿಕ್ ಗೆಲುವು ದಾಖಲಿಸಿ ಗಮನ ಸೆಳೆದಿದ್ದಾರೆ.
ಬ್ರಿಟಿಷ್ ಸಂಸತ್ತಿನಲ್ಲಿ ಭಾರತ-ಯುಕೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕುಮಾರ್ ಅವರು ಸಕ್ರಿಯ ಪಾತ್ರವಹಿಸಿದ್ದಾರೆ. ಸೌತ್ ಹಾಲ್‌ನ ಮಾಜಿ ಸಂಸದ ವೀರೇಂದ್ರ ಶರ್ಮ ಸೇರಿದಂತೆ ಗಣ್ಯರೊಂದಿಗೆ ‘ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್’ ಸಂಸ್ಥೆಯನ್ನು ಸ್ಥಾಪಿಸಿದ್ದು, ಸಂಸತ್ತಿನ ಆವರಣದಲ್ಲಿ ಆಯೋಜಿಸಿದ ಉದ್ಯಮ ಸಭೆಗಳಲ್ಲಿ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ನಾಯಕರು ಮತ್ತು ಜಾಗತಿಕ ಹೂಡಿಕೆದಾರರು ಭಾಗವಹಿಸಿದ್ದಾರೆ.
ಮೂಲತಃ ಕಾಸರಗೋಡಿನ ಕುಂಟಿಕಾನಮಠದ ಕುಮಾರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಮೈಸೂರಿನ ಜೆ.ಎಸ್.ಎಸ್. ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮಾ ಪದವಿ ಪಡೆದು, ನಂತರ ಲಂಡನ್‌ನಲ್ಲಿ ಎಂ.ಬಿ.ಎ. ಪೂರ್ಣಗೊಳಿಸಿದ್ದಾರೆ. ಯುಕೆಯ ಅರಸ್ ಮಾರ್ಕೆಟಿಂಗ್ ಲಿಮಿಟೆಡ್ ಹಾಗೂ ಅಮೆರಿಕಾದ ಅರಸ್ ಮಾರ್ಕೆಟಿಂಗ್ ಎಲ್.ಎಲ್‌ಸಿ ಸಂಸ್ಥೆಗಳ ನಿರ್ದೇಶಕರಾಗಿದ್ದು, ಣ್ಞಛ್ಠಟ ಎಡ್-ಟೆಕ್ ವೇದಿಕೆಯ ಸ್ಥಾಪಕರೂ ಆಗಿದ್ದಾರೆ.
ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ. ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ಅವರ ಪುತ್ರರಾಗಿರುವ ಅವರು, 500 ವರ್ಷ ಇತಿಹಾಸವಿರುವ ಕುಂಟಿಕಾನಮಠ ಶಂಕರನಾರಾಯಣ ದೇವಸ್ಥಾನದಲ್ಲಿ ಆರಾಧನೆ, ಜೀರ್ಣೋದ್ಧಾರ, ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಮಂತ್ರಾಲಯ ಪರಿಮಳ ಪ್ರಶಸ್ತಿಗಳು ಲಭಿಸಿವೆ. ಜತೆಗೆ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಯೂರೋಪಿನಾದ್ಯಂತ ಕನ್ನಡ ಸಂಸ್ಕೃತಿ ಹರಡುತ್ತಿದ್ದಾರೆ.
ಕೌನ್ಸಿಲ್ ತಂಡದೊಂದಿಗೆ.
ಫಾರ್ಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶ್ವ ಫಾರ್ಮಾಸಿಸ್ಟ್ ದಿನದಂದು ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಇಂಡಿಯನ್ ಫಾರ್ಮಾಕ್ಯೂಟಿಕಲ್ ಅಸೋಸಿಯೇಷನ್ ವತಿಯಿಂದ ಕುಮಾರ್ ಕುಂಟಿಕಾನಮಠ ಅವರನ್ನು ಗೌರವಿಸಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net