ಕಾಟಾಚಾರದ ತೇಪೆ ಕಾರ್ಯ VITTAL

ಕಲ್ಲಡ್ಕ-ಸಾರಡ್ಕ ರಸ್ತೆಯಲ್ಲಿ ಒಂದೇ ದಿನದಲ್ಲಿ ಕಿತ್ತು ಬಂದ ಡಾಂಬರು * ರಸ್ತೆ ಸ್ವಚ್ಛ ಮಾಡದೆ ಕಳಪೆ ಕಾಮಗಾರಿ * ಪರಿಶೀಲಿಸದ ಅಧಿಕಾರಿಗಳು, ಸಾರ್ವಜನಿಕರ ಆಕ್ರೋಶ
kalladka vittal saradka road
ಪಡಿಬಾಗಿಲಿನಲ್ಲಿ ಹಾಕಿದ ಡಾಂಬರು ಎಬ್ಬಿಸುತ್ತಿರುವ ಕಾರ್ಮಿಕರು.
Published on: 

ವಿಟ್ಲ: ಕಲ್ಲಡ್ಕ-ಸಾರಡ್ಕ ರಸ್ತೆ ದುರಸ್ತಿ ಕಾರ್ಯದ ಹೆಸರಿನಲ್ಲಿ ಕಾಟಾಚಾರದ ತೇಪೆ ಕಾರ್ಯ ನಡೆಯುತ್ತಿದ್ದು, ಹಾಕಿದ ಡಾಂಬರು ದಿನ ಕಳೆಯುವ ಮೊದಲೇ ಕಿತ್ತುಬರುತ್ತಿದೆ. ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಪದೇಪದೆ ಡಾಂಬರು ಹಾಕಿ ಬಿಲ್ ಮಾಡಿಕೊಳ್ಳುವ ತಂತ್ರಗಾರಿಕೆ ಬಹಿರಂಗವಾಗಿದೆ. ಕಾಮಗಾರಿ ಪರಿಶೀಲಿಸಿದ ಅಽಕಾರಿಗಳ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಗುಂಡಿ ಮುಚ್ಚುವ (ಪ್ಯಾಚ್ ವರ್ಕ್) ಕಾಮಗಾರಿ ತೀರಾ ಕಳಪೆಯಾಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಡಿಗಳಿಗೆ ಡಾಂಬರು ಹಾಕಿದ ಮಾರನೇ ದಿನವೇ ಕಿತ್ತುಬರುತ್ತಿದ್ದು, ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಶುಚಿಗೊಳಿಸದೆ ಡಾಂಬರು ಸ್ಪ್ರೇ: ಕಲ್ಲಡ್ಕ -ಸಾರಡ್ಕ ಹೆದ್ದಾರಿಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳನ್ನು ಸರಿಯಾಗಿ ಶುಚಿಗೊಳಿಸದೆ, ಧೂಳಿನ ಮೇಲೆಯೇ ಡಾಂಬರು ಚಿಮುಕಿಸಿ ಹರಕೆ ಸಂದಾಯದ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ಬದಿಯಲ್ಲಿ ಜಲ್ಲಿ ಸುರಿದು ಅದರ ಮೇಲೆ ತೆಳುವಾಗಿ ಡಾಂಬರು ಹಾಕಿ ರೋಲರ್ ಓಡಿಸಿ ಕಾಮಗಾರಿ ಮುಗಿದಿದೆ ಎಂದು ಬಿಂಬಿಸಲಾಗುತ್ತಿದೆ.

ಸಾರಡ್ಕ - ಪಡಿಬಾಗಿಲು ಮಾರ್ಗ ಸಂಪೂರ್ಣ ಹಾಳು: ಸಾರಡ್ಕ ಮತ್ತು ಪಡಿಬಾಗಿಲು ನಡುವಿನ ರಸ್ತೆ ಅಸಮರ್ಪಕ ನಿರ್ವಹಣೆಯಿಂದಾಗಿ ಸಂಪೂರ್ಣ ಹಾಳಾಗಿದ್ದು ಮರುನಿರ್ಮಾಣ ಮಾಡದ ಹೊರತು ರಸ್ತೆ ಸಂಚಾರಕ್ಕೆ ಯೋಗ್ಯವಾಗುವುದಿಲ್ಲ. ಆದರೆ, ಅಧಿಕಾರಿಗಳು ಕಳಪೆ ತೇಪೆ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ಮಳೆಗಾಲದ ವೇಳೆಗೆ ಈ ರಸ್ತೆ ಸಂಪೂರ್ಣ ಕಲ್ಲು-ಮಣ್ಣಿನ ಹಾದಿಯಾಗಿ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಣ್ಣ ಬಳಿಯುವ ನಾಟಕ: ವಿಟ್ಲ-ಕಬಕ ರಸ್ತೆಗೆ ಕಳೆದ ವರ್ಷ ತೇಪೆ ಹಾಕುವ ಬದಲಿಗೆ ಬಣ್ಣ ಬಳಿದು ದುರಸ್ತಿಯ ನಾಟಕ ಮಾಡಲಾಗಿತ್ತು. ಮಳೆ ಮುಗಿಯುತ್ತಿದ್ದಂತೆ ರಸ್ತೆ ತೀರಾ ದುಸ್ಥಿತಿಗೆ ತಲುಪಿದೆ. ಗುಂಡಿಗಳಲ್ಲಿ ನೀರು ತುಂಬಿದರೆ ಆಳ ತಿಳಿಯದಷ್ಟು ದೊಡ್ಡದಾಗಿವೆ. ಹಳೆಯ ಗುತ್ತಿಗೆದಾರರ ಗಡುವು ಮುಗಿದಿದ್ದು, ಹೊಸ ರಸ್ತೆಯನ್ನು ಶೀಘ್ರದ ನಿರ್ಮಿಸುತ್ತೇವೆ ಎಂದು ಪುನರುಚ್ಛರಿಸುವ ಅಧಿಕಾರಿಗಳು, ಸ್ಥಳ ಪರಿಶೀಲನೆಗೂ ಆಗಮಿಸದೆ ನಿರಾಸಕ್ತಿ ತಳೆದಿದ್ದಾರೆ.

ಕಳಪೆ ಕಾಮಗಾರಿಗೆ ಅಧಿಕಾರಿಗಳ ಬೆಂಬಲ!

ವಿಟ್ಲಪೇಟೆಯ ಬೊಬ್ಬೆಕೇರಿ ಹಾಗೂ ಕಾಶಿಮಠ ಭಾಗದಲ್ಲಿ ಮೂರ್ನಾಲ್ಕು ಕಡೆ ಬಿದ್ದಿದ್ದ ಗುಂಡಿಗಳಿಗೆ ಹಾಕಿದ ತೇಪೆ ದಿನ ಕಳೆಯುವ ಮುನ್ನವೇ ಕಿತ್ತುಬಂದಿದೆ. ಪಡಿಬಾಗಿಲು ಭಾಗದಲ್ಲಿ ಮುಚ್ಚಲಾದ ಗುಂಡಿಗಳ ಕಾಮಗಾರಿಯೂ ಅತ್ಯಂತ ಕಳಪೆಯಾಗಿದೆ. ಸಾರ್ವಜನಿಕರು ಆಕ್ಷೇಪವೆತ್ತಿದಾಗ, ಅಧಿಕಾರಿಗಳು ಕೇವಲ ಒಂದೆರಡು ಗುಂಡಿಗಳ ಕಳಪೆ ಕಾಮಗಾರಿಯನ್ನು ಸರಿಪಡಿಸುವಂತೆ ಹೇಳಿ ಗುತ್ತಿಗೆದಾರರನ್ನು ಸಮರ್ಥಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

‘ಮ್ಯಾಜಿಕ್ ತಂತ್ರಜ್ಞಾನ’?

ರಸ್ತೆ ತೇಪೆ ಕಾರ್ಯದಲ್ಲಿ ಸರ್ಕಾರದ ಹಣ ಪೋಲಾಗುತ್ತಿರುವುದು ಎದ್ದು ಕಾಣುತ್ತಿದೆ. ಒಂದು ಬಾರಿ ರಸ್ತೆ ದುರಸ್ತಿಯಾದಂತೆ ತೋರಿಸಿ, ಕೆಲವೇ ದಿನಗಳಲ್ಲಿ ರಸ್ತೆ ಮತ್ತೆ ಹಾಳಾಗುವಂತೆ ಕಾಮಗಾರಿ ನಡೆಸಲಾಗುತ್ತಿದೆ. ಬಳಿಕ ಮತ್ತೆ ಅನುದಾನ ಬಿಡುಗಡೆಯಾಗಿ ರಸ್ತೆ ದುರಸ್ತಿಯಾಗುವಾಗ ಮುಂದಿನ ಮಳೆಗಾಲ ಬಂದಿರುತ್ತದೆ. ಹೀಗೆ ದುರಸ್ತಿ ಮಾಡಿದ ರಸ್ತೆಯನ್ನೇ ಮತ್ತೆಮತ್ತೆ ದುರಸ್ತಿ ಮಾಡುವ ಮ್ಯಾಜಿಕ್ ತಂತ್ರಜ್ಞಾನ ಬಳಸುತ್ತಿರುವ ಅನುಮಾನ ಕಾಡುತ್ತಿದೆ. ಗುಂಡಿಬಿದ್ದ ರಸ್ತೆಯಲ್ಲಿ ದಿನನಿತ್ಯ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶಾಸಕ ರೈ ಗರಂ

ಮಳೆಗಾದಲ್ಲಿ ಹಾಳಾದ ರಸ್ತೆಗಳನ್ನು ಬಾಕ್ಸ್ ರೀತಿಯಲ್ಲಿ ತುಂಡರಿಸಿ ವೈಬ್ರೇಟರ್ ಬಳಸಿ ಅಡಿಯನ್ನು ಗಟ್ಟಿ ಮಾಡಿ ಬಳಿಕ ಡಾಂಬರು ಹಾಕಬೇಕೆಂಬ ಸೂಚನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ವಿಟ್ಲ ಭಾಗದಲ್ಲಿ ಇದನ್ನು ಪಾಲಿಸದೆ ಯದ್ವಾತದ್ವ ಕಾಮಗಾರಿ ನಡೆಸುತ್ತಿರುವುದಕ್ಕೆ ಶಾಸಕ ಗರಂ ಆಗಿದ್ದು ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

kalladka-vittal-saradka-road
ರಸ್ತೆ ಅಂಚಿನ ಮಣ್ಣಿನ ಮೇಲೆಯೇ ಜಲ್ಲಿ ರಾಶಿ ಹಾಕಿ ತೇಪೆ ಕಾರ್ಯ ನಡೆಸುತ್ತಿರುವುದು.
ಬೆಂಗಳೂರಿಗೆ ಕರ್ತವ್ಯದ ಮೇಲೆ ಆಗಮಿಸಿದ್ದು, ಕಾಮಗಾರಿಯಲ್ಲಿ ಸಮಸ್ಯೆಯಾಗಿರುವುದು ತಿಳಿಯಿತು. ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ಮಾಡಿದ ಎಲ್ಲ ಕೆಲಸವನ್ನು ತ್ವರಿತವಾಗಿ ಸರಿಪಡಿಸಿಕೊಡಲಾಗುವುದು.
ಅವಿನಾಶ್ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ಲೋಕೋಪಯೋಗಿ ಇಲಾಖೆ
kalladka-vittal-saradka-road
ವಿಟ್ಲ ಬೊಬ್ಬೆಕೇರಿಯಲ್ಲಿ ದಿನದ ಹಿಂದೆ ಹಾಕಲಾದ ಡಾಂಬರು ಏಳಲಾರಂಭಿಸಿರುವುದು.
ರಸ್ತೆಯ ಬದಿಗೆ ಜಲ್ಲಿ ರಾಶಿ ಹಾಕಿ ಡಾಂಬರು ಸುರಿದರೆ ಲಾರಿಗಳು ಸಂಚರಿಸುವ ಎದ್ದು ಹೋಗುತ್ತದೆ. ಗುಣಮಟ್ಟದಲ್ಲಿ ಕಾಮಗಾರಿ ನಡೆಸಲಾಗದಿದ್ದರೆ, ರಸ್ತೆಯನ್ನು ಹಾಗೇ ಬಿಟ್ಟರೆ ಇದಕ್ಕಿಂತ ಉತ್ತಮವಾಗಿ ಸಂಚರಿಸಬಹುದಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿದೆ. ಲೋಕಾಯುಕ್ತಕ್ಕೆ ದೂರು ನೀಡಿದರೆ ನಾಲ್ಕು ವರ್ಷದ ಬಳಿಕ ತನಿಖೆ ನಡೆಯುವುದು ದುರಂತ.
ವೆಂಕಟ್ರಮಣ ಪುಣಚ, ಸಾಮಾಜಿಕ ಹೋರಾಟಗಾರರು