

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಬಿರಿಕುಲಂನ ಪೋಟ್ಟಡ್ಕದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಕಳಿಯಾಟ ಮಹೋತ್ಸವ ಜನವರಿ 30, 31 ಮತ್ತು ಫೆಬ್ರವರಿ 1ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೋಟ್ಟಡ್ಕತ್ತಮ್ಮನ ವಳರ್‌ಮುಡಿ ನಿರ್ಮಾಣಕ್ಕಿರುವ ಅಡಕೆಮರ ಕಡಿಯುವ ಮುಹೂರ್ತ ನೆರವೇರಿತು.
ಕೆ.ಕೃಷ್ಣನ್ ಆಚಾರ್ಯ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಡಕೆ ಮರ ಕಡಿಯುವ ಮುಹೂರ್ತ ನೆರವೇರಿಸಿದರು. ನಂತರ ಕಡಿದ ಮರವನ್ನು ಸಂಗೀತ ವಾದ್ಯಘೋಷದ ಜತೆಗೆ ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ಜ.30ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ, ನಂತರ ದೀಪಾರಾಧನೆ ನಡೆಯಲಿದೆ. ಸಂಜೆ 7ಕ್ಕೆ ಕಳಿಯಾಟಕ್ಕೆ ಚಾಲನೆ ನೀಡಲಾಗುವುದು. 31ರಂದು ಬೆಳಗ್ಗೆ ವಿಷ್ಣು ಮೂರ್ತಿ, ಮಧ್ಯಾಹ್ನ ಚಾಮುಂಡೇಶ್ವರಿ ಮತ್ತು ಗುಳಿಗ ದೈವದ ನರ್ತನ ಸೇವೆ ನಡೆಯಲಿದೆ. ಸಂಜೆ ವಟ್ಟಕ್ಕಯಂ ಕಾವಿಲ್‌ನಲ್ಲಿ ದೀಪಾರಾಧನೆ, ಪೋಟ್ಟಡ್ಕತ್ತಮ್ಮನ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ತೋಟ್ಟಂಪಾಟ್, ವಟ್ಟಕ್ಕಯಂ ಕಾವಿಲ್‌ನಿಂದ ವೀರನ್ ತೆಯ್ಯಂ, ಭೈರವನ್ ತೆಯ್ಯಂನೊಂದಿಗೆ ಉತ್ಸವ ಪ್ರಾರಂಭವಾಗಲಿದೆ. ಫೆ.1ರಂದು ವಿಷ್ಣುಮೂರ್ತಿ, ಪೋಟ್ಟಡ್ಕಕ್ಕತಮ್ಮ, ಗುಳಿಗ ದೈವಗಳ ನಿರ್ಗಮನ, ಚಾಮುಂಡೇಶ್ವರಿ ಪೋಟ್ಟಡ್ಕತ್ತ್ ಹಾಗೂ ವಟ್ಟಕ್ಕಾಯತ್ ಚಾಮುಂಡೇಶ್ವರಿ ವಟ್ಟ ದೈವಗಳ ಭೇಟಿ ನಡೆಯಲಿದೆ.