ಅತಿವೃಷ್ಟಿಯಿಂದ ಶೇ.75ರಷ್ಟು ಬೆಳೆ ಹಾನಿ : ಮಾಹಿತಿ ರೈತರಿಗೆ ನಷ್ಟ ಪರಿಹಾರ

ಕೃಷಿಕ ಸಮಾಜದ ಕಡಬ ತಾಲೂಕು ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿದರು.
ಕೃಷಿಕ ಸಮಾಜದ ಕಡಬ ತಾಲೂಕು ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಕಡಬ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ನಡೆಯಿತು.

ಕೃಷಿಕ ಸಮಾಜ ಕಡಬ ತಾಲೂಕು ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಕರಾವಳಿ ಭಾಗದಲ್ಲಿ ಅತಿವೃಷ್ಟಿಯಿಂದ ಶೇ.75ರಷ್ಟು ಬೆಳೆ ಹಾನಿಯಾಗಿದೆ. ಆದರೆ ಪರಿಹಾರವಾಗಿ ರೈತರಿಗೆ ಸಿಗುವ ಹವಾಮಾನ ಆಧಾರಿತ ಬೆಲೆ ವಿಮೆ ಮೊತ್ತ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಅತ್ಯಲ್ಪವಾಗಿದೆ. ಹಲವು ರೈತರಿಗೆ ಕಟ್ಟಿದ ಪ್ರೀಮಿಯಂ ಹಣದಷ್ಟು ಬಂದಿಲ್ಲ. ಹೀಗಾಗಿ ಸರ್ಕಾರ ರೈತರಿಗೆ ಬೆಲೆ ನಷ್ಟ ಪರಿಹಾರ ನೀಡಬೇಕೆಂದು ನಿರ್ಣಯಿಸಲಾಯಿತು.

ಇತ್ತೀಚೆಗೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿನ ರೈತರೋರ್ವರು ಕೋವಿ ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕಿದಾಗ ಕಾಡು ಪ್ರಾಣಿಗಳಿಂದ ಬೆಳೆ ನಾಶಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಪಡೆದ ದಾಖಲೆ ಇಲ್ಲದ ಕಾರಣ ನವೀಕರಣ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹಿಂಬರಹ ಬಂದಿದೆ. ಗ್ರಾಮೀಣ ಭಾಗದಲ್ಲಿ ಕೋತಿಗಳು ಕೃಷಿ ಫಸಲನ್ನು ಹಾನಿ ಮಾಡುತ್ತಿದೆ. ಕೋತಿಗಳಿಂದ ಬೆಳೆ ನಾಶವಾದರೆ ಇಲಾಖೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಇಂತಹ ಸಂದರ್ಭ ರೈತ ಪರಿಹಾರ ದಾಖಲೆ ನೀಡುವುದಾದರೂ ಹೇಗೆ ಎಂದು ಸಭೆಯಲ್ಲಿ ಚರ್ಚೆ ನಡೆದು ನಿಯಮವನ್ನು ಸರಳೀಕರಣಗೊಳಿಸಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಳ್ಳುವ ಬಗ್ಗೆ ನಿರ್ಣಯಿಸಿಕೊಳ್ಳಲಾಯಿತು.

ಸಾಮಾಜಿಕ ಅರಣ್ಯ ಪಂಜ ವಲಯ ಅರಣ್ಯಾಧಿಕಾರಿ ಪಿ.ಕೆ.ವಿದ್ಯಾರಾಣಿ, ಸಹಾಯಕ ಕೃಷಿ ನಿರ್ದೇಶಕ ಚೆಲುವರಂಗಪ್ಪ ಟಿ.ಜಿ., ಪಶುವೈದ್ಯಾಧಿಕಾರಿ ಡಾ.ಮಲ್ಲಿಕಾ, ತೋಟಗಾರಿಕಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕಿ ಮಧುಶ್ರೀ ಇಲಾಖಾವಾರು ಮಾಹಿತಿ ನೀಡಿದರು. ಕೃಷಿಕ ಸಮಾಜದ ಕಡಬ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕುಮಾರ್, ಖಜಾಂಚಿ ಜಯರಾಮ ಎಂ., ಜಿಲ್ಲಾ ಪ್ರತಿನಿಧಿ ಮಹೇಶ್ ಕೆ.ಸವಣೂರು, ಸದಸ್ಯರಾದ ಎ.ಎಸ್.ವಾಸುದೇವ, ಉದಯ ರೈ ಎಂ., ಪ್ರಕಾಶ್ ಪಿ.ಗೌಡ, ಬಿ.ಬಾಳಪ್ಪ ಪೂಜಾರಿ, ತಾರನಾಥ ಕೆ. ಮೊದಲಾದವರಿದ್ದರು. ಪುತ್ತೂರು ತಾಲೂಕು ಕೃಷಿ ಅಧಿಕಾರಿ ಯಶಸ್ ಮಂಜುನಾಥ್ ಎಂ. ಸ್ವಾಗತಿಸಿದರು.

23ರಂದು ರೈತ ದಿನಾಚರಣೆ

ಪುತ್ತೂರು ರೈತ ಸಂಪರ್ಕ ಕೇಂದ್ರದಲ್ಲಿ ಡಿ.23ರಂದು ನಡೆಯುವ ರೈತ ದಿನಾಚರಣೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜ.10, 11, 12ರಂದು ನಡೆಯುವ ಕೃಷಿ ಮೇಳಕ್ಕೆ ಅತಿ ಹೆಚ್ಚು ರೈತರು ಭಾಗವಹಿಸಲು, ರೈತರಿಗೆ ಸಂಬಂಧಪಟ್ಟ ಇಲಾಖೆ ಮಾಹಿತಿಯನ್ನು ಕೃಷಿಕ ಸಮಾಜದ ಎಲ್ಲ ಪದಾಧಿಕಾರಿಗಳು ಆಯಾಯ ಭಾಗದ ರೈತರಿಗೆ ತಿಳಿಸಬೇಕು ಎಂದು ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net