

ಪ್ರಮುಖ ಮುಖ್ಯಾಂಶಗಳು
ಪುತ್ತೂರು:ಕಬಕ- ವಿಟ್ಲ- ಕಡಂಬು ನಡುವೆ ಎಸ್.ಎಚ್.ಡಿ.ಪಿ. ಯೋಜನೆಯಸುಮಾರು ೧೩ ಕೋಟಿ ರೂ.ವೆಚ್ಚದಲ್ಲಿ ಮರು ಗುತ್ತಿಗೆಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಿದ್ದು, ಇದರ ನಿರ್ವಹಣೆಯನ್ನು ಗುತ್ತಿಗೆದಾರ ಸರಿಯಾಗಿ ನಿರ್ವಹಿಸದೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ವಿನೂತನ ಮಾದರಿಯ ‘ಈರುಳ್ಳಿ ಸಿಪ್ಪೆ’ಯಂತಹತೇಪೆ ಹಚ್ಚಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚಲು ರಸ್ತೆ ಮೇಲ್ಮೈಗೆ ಬಣ್ಣ ಬಳಿದಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ವಿಟ್ಲದಿಂದಕಡಂಬು ನಡುವೆ ಕಾಮಗಾರಿಯ ಸಮಯದಲ್ಲಿ ಗಮನಿಸುವವರಿಲ್ಲ ಎಂಬ ಕಾರಣಕ್ಕೆ ಸರಿಯಾಗಿ ಡಾಂಬರು ಹಾಕದೆ ಪಲಾಯನ ಮಾಡಿದ್ದರು. ಕಬಕ- ವಿಟ್ಲ ನಡುವೆ ಈರುಳ್ಳಿ ಸಿಪ್ಪೆಯಷ್ಟು ಡಾಂಬರ್ ಹಾಕಿ ಹಲವು ಕಡೆಯಲ್ಲಿ ಸ್ಕಿನ್ ಎದ್ದು ಹೋಗಿ ವರ್ಷಗಳೇ ಕಳೆದಿದೆ. ಇದಕ್ಕೆ ನಿರ್ವಹಣೆಯಡಿಯಲ್ಲಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಸ್.ಎಚ್.ಡಿ.ಪಿ. ಅಧಿಕಾರಿಗಳುಇತ್ತಕಡೆ ಸುಳಿದಿಲ್ಲ.
ಕೆಲವುದಿನಗಳಿಂದ ಕುಂಟುತ್ತಾ ವಿವಿಧ ನೆಪಗಳನ್ನು ಹೇಳುತ್ತಾ ದೊಡ್ಡ ಗುಂಡಿಗಳಿಗೆ ತೇಪೆ ಕಾರ್ಯವನ್ನು ಗುತ್ತಿಗೆದಾರ ನಿರ್ವಹಣೆಯಡಿಯಲ್ಲಿ ನಡೆಸುತ್ತಿದ್ದಾರೆ. ಕಬಕ- ನೀರಪಳಿಕೆಯಲ್ಲಿ ೧೦ ಮೀಟರ್ ಡಾಂಬರ್ಹಾಕಿ ಕೆಲವು ದಿನ ಗುತ್ತಿಗೆದಾರರು ಕಣ್ಮರೆಯಾಗಿದ್ದರು. ಆ ಬಳಿಕ ಅದನ್ನುಮುಂದುವರಿಸಿ ಕಂಬಳ ಬೆಟ್ಟು ತನಕ ಕಾಮಗಾರಿ ಪೂರ್ಣ ಗೊಳಿಸಿದ ವರದಿಯನ್ನು ಇಲಾಖೆಗೆ ನೀಡಿದ್ದಾರೆ.
ನೀರಪಳಿಕೆಯಲ್ಲಿಡಾಂಬರು ಹಾಕಿದ ಜಾಗವನ್ನು ಅಳತೆ ಮಾಡಲು ಬರುವ ಸಂದರ್ಭವೇ ಜಲ್ಲಿ ಎದ್ದು ಗುಂಡಿಯ ತಳ ಭಾಗ ಕಾಣಿಸಲಾರಂಭಿಸಿದರೂ,ಅದಕ್ಕೆ ಅಗತ್ಯ ಕ್ರಮವಿಲ್ಲ. ಗುಣಮಟ್ಟವಿಲ್ಲದೆ ನಡೆಸುವ ಕಾಮಗಾರಿಯನ್ನು ಅಧಿಕಾರಿಗಳು ಪ್ರಶ್ನಿಸಿದರೆ, ತನ್ನ ರಾಜಕೀಯ ಪ್ರಭಾವ ಬಳಸಿ ಬೆದರಿಸುವ ಕಾರ್ಯ ಗುತ್ತಿಗೆದಾರರಿಂದ ನಡೆಯುತ್ತಿದೆ ಗಂಭೀರ ಅರೋಪವೂ ಕೇಳಿ ಬಂದಿದೆ.
ಕಂಬಳಬೆಟ್ಟು ಸಮೀಪ ಮೋರಿ ಅಳವಡಿಸುವ ಸಂದರ್ಭ ಕಿತ್ತು ಹಾಕಿದ ಡಾಂಬರು ಸರಿಪಡಿಸದೆ ಮತ್ತಷ್ಟು ಜಾಗದ ಡಾಂಬರು ಕಿತ್ತು ಹೋಗಿತ್ತು. ಮಳೆ ನಿಂತ ಬಳಿಕ ದುರಸ್ತಿ ನಡೆಸಿದ್ದು, ಒಂದೇ ದಿನಕ್ಕೆ ಕಿತ್ತು ಹೋಗಿದೆ. ಜಲ್ಲಿಯ ತಳ ಭಾಗಕ್ಕೆ ಡಾಂಬರ್ಸ್ಪ್ರೇ ಹೊಡೆಯದೆ ಕಾಮಗಾರಿ ನಡೆಸಿದ್ದರಿಂದ ಸಮಸ್ಯೆಯಾಗಿದೆ ಎಂಬುದನ್ನು ಮರೆ ಮಾಚಿ, ಪಕ್ಕದಲ್ಲಿರುವ ರಸ್ತೆಯ ಮೂಲಕ ನೀರು ಡಾಂಬರಿಗೆ ನುಗ್ಗಿ ನಡೆಸಿದ ಕಾಮಗಾರಿ ಹಾಳಾಗಿದೆ ಎಂಬ ಸಬೂಬು ನೀಡಿದ್ದರು.
ವಿಟ್ಲ-ಕಲ್ಲಕಟ್ಟ ಸೇತುವೆ ಸಮೀಪದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದ್ದು, ಅದಕ್ಕೆ ಜಲ್ಲಿ ಹಾಸಿ ಮೇಲಿಂದ ಸ್ವಲ್ಪ ಡಾಂಬರು ಬಣ್ಣ ಬಳಿದು ತೇಪೆ ಶಾಸ್ತ್ರ ಮಾಡುವುದಕ್ಕೆ ಮುಂದಾಗಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಾಕಿದ ಜಲ್ಲಿಯನ್ನು ಮತ್ತೆ ತೆಗೆದು, ಸ್ಥಳಕ್ಕೆ ಸ್ಪ್ರೇ ಯಂತ್ರವನ್ನು ತರಿಸಿ ಮರು ತೇಪೆ ಕಾರ್ಯವನ್ನು ಮಾಡಿಸುವ ಕಾರ್ಯ ಅಧಿಕಾರಿ ವರ್ಗದಿಂದ ನಡೆದಿದೆ. ಇದರಿಂದ ಒಂದು ಗುಂಡಿ ಮುಚ್ಚಲು ಸುಮಾರು ಐದು ಮಂದಿ ಕಾರ್ಮಿಕರಿಗೆ ಒಂದು ದಿನ ಬೇಕಾಯಿತು.
ಕಂಬಳ ಬೆಟ್ಟಿನಲ್ಲಿ ಒಂದು ಹನಿ ನೀರು ಹೋಗುವಾಗ ಎದ್ದು ಹೋಗುವ ಡಾಂಬರು ಮಳೆಗಾಲದಲ್ಲಿ ಉಳಿಯಲು ಸಾಧ್ಯವೇ? ಕಾಮಗಾರಿಯನ್ನು ಮುಂದಿನ ಟೆಂಡರ್ ಪ್ರಕ್ರಿಯೆ ಬೇಗ ನಡೆಯಲಿ ಎಂಬ ನಿಟ್ಟಿನಲ್ಲೇ ಮಾಡುವಂತೆ ಕಾಣುತ್ತಿದೆ. ಈಗ ಹಾಕಿದ ತೇಪೆಯನ್ನು ತೆರವು ಮಾಡಿ ಮತ್ತೆ ವೈಜ್ಞಾನಿಕವಾಗಿ ಕೆಲಸ ಮಾಡಿಸುವ ಕಾರ್ಯವಾಗಬೇಕು.