ಅಪಘಾತ ಪ್ರಕರಣ ಬಸ್ ಚಾಲಕ-ಮಾಲೀಕರಿಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು : ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿ ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯವು ಚಾಲಕ ಮತ್ತು ಮಾಲೀಕ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಚಾಲಕ ನಿಶಿತ್ ಶೆಟ್ಟಿ ಮತ್ತು ಬಸ್ ಮಾಲೀಕ ಪ್ರೀತಂ ದೇವೇಂದ್ರ ಕುಲಾಲ್ ಶಿಕ್ಷೆಗೆ ಒಳಗಾದವರು.
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ಸಂಗೀತ ಮೊಬೈಲ್ ಶಾಪ್ ಎದುರು 2024ರ ಜು.10ರಂದು ಸುಂದರಿ(66) ಅವರು ಶಕ್ತಿನಗರಕ್ಕೆ ಹೋಗುವ ಬಸ್ಸನ್ನು ಹತ್ತಲು ರಸ್ತೆ ದಾಟುತ್ತಿದ್ದಾಗ ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ನಿಶಿತ್ ಶೆಟ್ಟಿ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬಸ್ ಢಿಕ್ಕಿ ಹೊಡೆಯಿತು. ಸುಂದರಿ ಅವರು ರಸ್ತೆಯ ಮೇಲೆ ಬಿದ್ದು ಬಸ್ ನ ಎದುರಿನ ಚಕ್ರವು ಅವರ ಬಲಕಾಲಿನ ಮೇಲೆ ಹರಿದು ತೀವ್ರ ಸ್ವರೂಪದ ಗಾಯವಾಗಿತ್ತು. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ಹಾಗೂ ಭಾರತೀಯ ಮೋಟಾರು ವಾಹನ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಚಾಲಕ ಚಾಲನಾ ಅನುಜ್ಞಾಪತ್ರ ಇಲ್ಲದೇ ಬಸ್ ಚಲಾಯಿಸಿರುವುದು ಗೊತ್ತಾಗಿತ್ತು. ಹಾಗಾಗಿ ಚಾಲನಾ ಅನುಜ್ಞಾಪತ್ರ ಇಲ್ಲದೇ ಬಸ್ ಚಲಾಯಿಸಿರುವ ಬಗ್ಗೆ ಹಾಗೂ ಚಾಲನಾ ಅನುಜ್ಞಾಪತ್ರ ಇಲ್ಲದೇ ಬಸ್ ನ್ನು ಚಲಾಯಿಸಲು ನೀಡಿರುವ ಬಗ್ಗೆ ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ ಜೆ.ಎಂ.ಎಫ್. ಸಿ 8ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷ ಆರ್. ಅವರು ಆ.25ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ಬಸ್ ಚಾಲಕ ನಿಶಿತ್ ಶೆಟ್ಟಿಗೆ ಚಾಲನಾ ಅನುಜ್ಞಾಪತ್ರ ಇಲ್ಲದೇ ಬಸ್ಸು ಚಲಾಯಿಸಿದ್ದಕ್ಕೆ ಒಂದು ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ಹಾಗೂ ಬಸ್ ನ ಮಾಲೀಕ ಪ್ರೀತಮ್ ದೇವೇಂದ್ರ ಕುಲಾಲ್ ಚಾಲನಾ ಅನುಜ್ಞಾಪತ್ರ ಇಲ್ಲದೇ ಬಸ್ ನ್ನು ಚಾಲಯಿಸಲು ನೀಡಿದ್ದಕ್ಕೆ ಆತನಿಗೆ ಒಂದು ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಸಂಚಾರ ಪೂರ್ವ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಲಕ್ಷ್ಮೀಕಾಂತ್ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಆರೋನ್ ಡಿ ಸೋಜ ವಿಟ್ಲ ಅವರು ಸಾಕ್ಷಿ ವಿಚಾರಣೆ ನಡೆಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net