ಯುವತಿಯೊಂದಿಗೆ ಅಸಭ್ಯ ವರ್ತನೆ, ಆರೋಪಿ ಸೆರೆ

ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
crime
crime
Published on: 

ಬೆಳ್ತಂಗಡಿ: ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ವೇಣೂರು ನಿವಾಸಿ ಸೈಯ್ಯದ್ ಮಹಮ್ಮದ್ ಇಸಾಕ್ (61) ಎಂಬಾತನ್ನು ವೇಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಶನಿವಾರ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ಆರೋಪಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಮಾತನಾಡಿ, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆಯತಪ್ಪಿ ಬಾವಿಗೆ ಬಿದ್ದು ಸಾವು

ಕಾಸರಗೋಡು: ಕಳತ್ತೂರು ಕಾರಿಂಜ ಅಳಮನೆ ನಿವಾಸಿ ಸಂಜೀವ(55) ಎಂಬುವರ ಮೃತದೇಹ ಮನೆ ಸಮೀಪದ ಆವರಣಗೋಡೆಯಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಇವರ ಪತ್ನಿ ಕೆಲಸಕ್ಕೆ ಹಾಗೂ ಪುತ್ರ ಕಾಲೇಜಿಗೆ ತೆರಳಿದ್ದ ಸಂದರ್ಭ ಹಗಲಿನಲ್ಲಿ ಒಂಟಿಯಾಗಿದ್ದರು. ಸಂಜೆ ಪುತ್ರ ಕಾಲೇಜಿನಿಂದ ಆಗಮಿಸಿದಾಗ ಸಂಜೀವ ಕಾಣೆಯಾಗಿರುವುದರಿಂದ ಹುಡುಕಾಡುವ ಮಧ್ಯೆ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ತಕ್ಷಣ ಅಗ್ನಿಶಾಮಕದಳ ಅವರನ್ನು ಮೇಲಕ್ಕೆತ್ತಿ ಕುಂಬಳೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಆಯತಪ್ಪಿ ಬಾವಿಗೆ ಬಿದ್ದಿರಬೇಕೆಂದು ಸಂಶಯಿಸಲಾಗಿದೆ.

ಪಲ್ಟಿಯಾದ ಬಸ್, ಪ್ರಯಾಣಿಕರಿಗೆ ಗಾಯ

ಕಾಸರಗೋಡು: ಬೇಕಲ ಸೇತುವೆಯ ಸನಿಹ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಸನಿಹದ ಹೊಂಡಕ್ಕೆ ಪಲ್ಟಿಯಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾನುವಾರ ನಸುಕಿಗೆ ಅಪಘಾತ ಸಂಭವಿಸಿದ್ದು ಗೋವಾದಿಂದ ಕೊಚ್ಚಿಗೆ ತೆರಳುತ್ತಿದ್ದ ಬಸ್ ಇನ್ನೊಂದು ವಾಹನ ಹಿಂದಿಕ್ಕುವ ಮಧ್ಯೆ, ಎದುರಿನಿಂದ ಆಗಮಿಸಿದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಮಗುಚಿಬಿದ್ದಿದೆ. ಬಸ್ಸಿನಲ್ಲಿ 36 ಪ್ರಯಾಣಿಕರಿದ್ದರು. ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ ಕ್ರೇನ್ ಬಳಸಿ ನಜ್ಜುಗುಜ್ಜಾದ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ನಂತರ ಬೇರೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಿಕೊಡಲಾಯಿತು.

ಎಂಡಿಎಂಎ ಸಾಗಾಟ ಆರೋಪಿ ಬಂಧನ

ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 6.33 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವ ಪೊಲೀಸರು ಮಂಜೇಶ್ವರ ಗ್ರಾಮ ಪಂಚಾಯಿತಿ ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಂಟ್ವಾಳ ನೀರಾರಿ ನಿವಾಸಿ ಹಂಸ(46) ಎಂಬಾತನನ್ನು ಬಂಧಿಸಿದ್ದಾರೆ. ಈತ ಕರ್ನಾಟಕದ ಬಂಟ್ವಾಳದ ಪಾಂಡವರಕಲ್ಲು ನೀರಾರಿ ಮೂಲದವ. ಶನಿವಾರ ಸಂಜೆ ಮಂಜೇಶ್ವರ ಸಮುದ್ರ ಕರಾವಳಿಯಲ್ಲಿ ಇನ್‌ಸ್ಪೆಕ್ಟರ್ ಎಂ.ವಿ.ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಸ್ಕೂಟರಲ್ಲಿ ಆಗಮಿಸಿದ ಹಂಸ ಪೊಲೀಸರನ್ನು ಕಂಡು ಪರಾರಿಯಗಲೆತ್ನಿಸಿದ್ದು ಹಿಂಬಾಲಿಸಿ ಸೆರೆ ಹಿಡಿದು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.

ಅಕ್ರಮ ಸಾಗಿಸುತ್ತಿದ್ದ 1,062 ಲೀಟರ್ ಮದ್ಯ ವಶ

ಕಾಸರಗೋಡು: ಅರಿಕ್ಕಾಡಿ ಟೋಲ್ ಪ್ಲಾಜಾ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ 1,062 ಲೀಟರ್ ಮದ್ಯವನ್ನು ಕಾಸರಗೋಡು ಅಬಕಾರಿ ಎನ್‌ಫೋರ್ಸ್‌ಮೆಂಟ್ ಆ್ಯಂಡ್ ಆ್ಯಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ವಾಹನ ಚಾಲಕ, ಕಾಸರಗೋಡು ತಾಲೂಕಿನ ತೆಕ್ಕಿಲ್ ವಿಲೇಜ್‌ನ ಚಟ್ಟಂಚಾಲ್ ಪುತ್ತರಿಯಡ್ಕಂ ನಿವಾಸಿ ಸಲೀಂ ಸಿ.ಎಚ್.(37) ಎಂಬಾತನನ್ನು ಬಂಧಿಸಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ನಸುಕಿಗೆ ಅರಿಕ್ಕಾಡಿ ಟೋಲ್ ಪ್ಲಾಜಾ ಸನಿಹ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅಬಕಾರಿ ಅಧಿಕಾರಿ ರಂಜಿತ್ ಕೆ.ವಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಪಿಕಪ್ ಇನ್ಸುಲೇಟರ್ ವಾಹನವನ್ನು ತಪಾಸಣೆ ನಡೆಸಿದಾಗ, ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಪತ್ತೆಯಾಗಿದೆ. ಒಟ್ಟು 123 ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ 180 ಮಿ.ಲೀ. ಸಾಮರ್ಥ್ಯದ 5,904 ಬಾಟಲಿಗಳಲ್ಲಿ ತುಂಬಲಾಗಿದ್ದ 1,062.72 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net