ವಿದ್ಯಾಭ್ಯಾಸದೊಂದಿಗೆ ಬದುಕು ಕಟ್ಟಿಕೊಳ್ಳುವ ಗುರಿ : ಸುನೀಲ್ ಕುಮಾರ್ ದಡ್ಡು ಹೇಳಿಕೆ

ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಪ್ರೋತ್ಸಾಹ ಧನ ವಿತರಿಸಲಾಯಿತು.
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಪ್ರೋತ್ಸಾಹ ಧನ ವಿತರಿಸಲಾಯಿತು.
Published on

ಉಪ್ಪಿನಂಗಡಿ: ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಹಿತ ಶಿಸ್ತು ಹಾಗೂ ಸಂಸ್ಕಾರ ಬೆಳೆಸಿಕೊಳ್ಳಬೇಕು, ಹಣ ಸಂಪಾದನೆ ವಿದ್ಯಾಭ್ಯಾಸದ ಉದ್ದೇಶ ಅಲ್ಲ, ಉತ್ತಮ ಬದುಕು ಕಟ್ಟಿಕೊಳ್ಳುವುದು ಕೂಡ ನಮ್ಮ ಗುರಿಯಾಗಬೇಕು ಎಂದು ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಹೇಳಿದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಮಹತ್ವಾಕಾಂಕ್ಷಿ ಯೋಜನೆ ವಿದ್ಯಾಶ್ರೀ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸಹಕಾರಿ ಸಂಘ ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿ ಮೇಲೆ ವಿದ್ಯಾಶ್ರೀ ಯೋಜನೆ ಹಮ್ಮಿಕೊಂಡಿದ್ದು, ನಾಳೆಯ ದಿನ ವಿದ್ಯಾರ್ಥಿಗಳು ಸಾಮಾಜಿಕ ಹಿತ ಬಯಸುವ ರೀತಿಯಲ್ಲಿ ಜೀವನ ನಡೆಸಬೇಕು. ಉತ್ತಮ ಗುಣನಡೆತೆ ರೂಪಿಸಿಕೊಂಡಲ್ಲಿ, ಪಡೆದ ವಿದ್ಯೆಗೆ ಮೌಲ್ಯ ಬರುತ್ತದೆ. ಇದರ ಜತೆ ತಮ್ಮ ಹೆತ್ತವರು ಕೂಡ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಅಧ್ಯಯನದ ಸಮಯದಲ್ಲಿ ದಾರಿ ತಪ್ಪದಂತೆ ಎಚ್ಚರದಿಂದ ಗಮನಿಸಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದರು.

ಸಂಘದ ಉಪಾಧ್ಯಕ್ಷ ದಯಾನಂದ ಎಸ್., ನಿರ್ದೇಶಕರಾದ ರಾಜೇಶ್, ರಾಘವ ನಾಯ್ಕ, ಸುಂದರ ಕೆ., ಸಂಧ್ಯಾ, ಗೀತಾ, ಸಂಘ ನೌಕರರು, ಸದಸ್ಯರು, ವಿದ್ಯಾರ್ಥಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಸ್ವಾಗತಿಸಿದರು. ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಎಚ್. ವಂದಿಸಿದರು. ಪ್ರವೀಣ ಆಳ್ವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net