ಇಲ್ಲಿನ ಸೀಮೆ ದೇವಸ್ಥಾನವಾದ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ನಾನಾ ಅಭಿವೃದ್ಧಿ ಕಾರ್ಯಗಳ ಕುರಿತು ಹಿರಿಯ ವೈದ್ಯ ಡಾ. ಮೋಹನದಾಸ ಗೌಡ ಅಧ್ಯಕ್ಷತೆಯಲ್ಲಿ ಏ.19ರಂದು ಕೊಕ್ಕಡದ ಶ್ರೀರಾಮ ಭಜನಾ ಮಂದಿರದಲ್ಲಿ ಸಭೆ ನಡೆಯಿತು.
ಸಭೆ ಆರಂಭಕ್ಕೂ ಮುನ್ನ ಕ್ಷೇತ್ರಾಧಿಪತಿ ವೈದ್ಯನಾಥ ದೇವರ ಸಾನ್ನಿಧ್ಯದಲ್ಲಿ ಭಕ್ತರ ಸಾಮೂಹಿಕ ಪ್ರಾರ್ಥನೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಎಡಪಡಿತ್ತಾಯ ಇದುವರೆಗಿನ ಜಮಾ- ಖರ್ಚಿನ ಬಗ್ಗೆ ವಿವರಗಳನ್ನು ಮಂಡಿಸಿದರು. ಇದುವರೆಗೆ ಒಟ್ಟು 4 ಕೋಟಿ 13 ಲಕ್ಷ ಸಂಗ್ರಹವಾಗಿದ್ದು, 5 ಕೋಟಿ 28 ಲಕ್ಷದಷ್ಟು ಖರ್ಚಾಗಿದೆ ಎಂದರು. ಜೀರ್ಣೋದ್ಧಾರ ಕಾರ್ಯ ಶೀಘ್ರ ಪೂರ್ಣಗೊಂಡು ಶಿಲಾಮಯ ಗರ್ಭಗುಡಿಯಲ್ಲಿ ಶ್ರೀದೇವರು ನೆಲೆಗೊಳ್ಳುವಂತಾಗಲು ಭಕ್ತರ ಸಹಾಯ ಕೋರಿದರು. ಈ ಸಂದರ್ಭ ಸಭೆಯಲ್ಲಿದ್ದ ಪುರಂದರ ಕಡೀರ ಮಾತನಾಡಿ ಬೈಲುವಾರು ಭಕ್ತಾದಿಗಳು ವಾಗ್ದಾನ ಮಾಡಿರುವ ಪಟ್ಟಿ ಹಾಗೂ ಈವರೆಗೆ ಸಂದಾಯವಾಗಿರುವ ಮೊತ್ತದ ಪಟ್ಟಿಯನ್ನು ವಿವರವಾಗಿ ನೀಡುವಂತೆ ಕೇಳಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳು ಸಭೆಯಲ್ಲಿ ಇಲ್ಲದಿದ್ದ ಕಾರಣ ಮುಂದಿನ ತಿಂಗಳ ಮೊದಲ ಸಭೆಯಲ್ಲಿ ನೀಡುವುದಾಗಿ ಎಡಪಡಿತ್ತಾಯರು ತಿಳಿಸಿದರು. ಆರ್ಥಿಕ ಸಹಕಾರ ದೊರೆತರೆ ಮುಂದಿನ ಎರಡು ತಿಂಗಳಲ್ಲಿ ಶ್ರೀ ದೇವರ ಗರ್ಭಗುಡಿಯ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ದೇವಳದ ಶಿಲ್ಪಿ ಪದ್ಮನಾಭ ಪಿಲಿಗೂಡು ಭರವಸೆ ನೀಡಿದರು. ದೇವಳಕ್ಕೆ ಅವಶ್ಯಕವಾಗಿರುವ ಮರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಲ್ಲಿ ಮರದ ಕೆತ್ತನೆಗಳ ಕಾರ್ಯ ಶೀಘ್ರವೇ ಮುಗಿಸಿ ಕೊಡುವ ಭರವಸೆಯನ್ನು ದೇವಳದ ಆಚಾರಿ ಸುಬ್ರಹ್ಮಣ್ಯ ಆಚಾರ್ಯ ತಿಳಿಸಿದರು. ಈ ಸಂಬಂಧ ಮರದ ವ್ಯವಸ್ಥೆಗೆ ಭಕ್ತಾದಿಗಳ ಸಹಕಾರವನ್ನು ಕೋರಲಾಯಿತು. ಜೀರ್ಣೋದ್ಧಾರದ ಆಯವ್ಯಯಗಳ ಅಂದಾಜು ಪಟ್ಟಿಯ ಬಗ್ಗೆ ಸಭೆಯಲ್ಲಿ ಬಾಲಕೃಷ್ಣ ಬಳಕ್ಕ ಪ್ರಶ್ನಿಸಿದರು. ದೇವಳದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ ಐದು ವರ್ಷಗಳಾಗಿದ್ದು, ಆರಂಭದಲ್ಲಿ ಮಾಡಿದ ಆಯವ್ಯಯಗಳ ಅಂದಾಜು ಪಟ್ಟಿಗೂ ಪ್ರಸ್ತುತ ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ಆಗುವ ಖರ್ಚು ವೆಚ್ಚಗಳು ಹೆಚ್ಚಳವಾಗುತ್ತಿದ್ದು, ಜೀರ್ಣೋದ್ಧಾರ ಕಾರ್ಯಗಳು ವಿಳಂಬವಾದಲ್ಲಿ ಇನ್ನೂ ಆಯವ್ಯಯ ಪಟ್ಟಿ ಏರಿಕೆಯಾಗಬಹುದು ಎಂದು ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ ಉತ್ತರಿಸಿದರು. ಜೀರ್ಣೋದ್ಧಾರ ಕಾರ್ಯಗಳು ಮುಗಿಯುವವರೆಗೆ ವಾರಕ್ಕೆ 100 ರೂ.ನಂತೆ ಪ್ರತಿ ಮನೆಯಿಂದ ದೇವಳಕ್ಕೆ ಒಪ್ಪಿಸಿ ರಶೀದಿ ಮಾಡಿದುಕೊಳ್ಳುವಂತೆ ವಿನಂತಿಸಲಾಯಿತು.
ಗ್ರಾಮದ ಭಕ್ತರು ಜೀರ್ಣೋದ್ಧಾರ ಕಾರ್ಯಗಳಿಗೆ ವಾಗ್ದಾನ ಮಾಡಿರುವ ಮೊತ್ತವನ್ನು ಕಂತುಗಳ ಮೂಲಕ ಶೀಘ್ರ ಪಾವತಿಸುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಮಹಿಳಾ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭ ಬೈಲುವಾರು ಸಮಿತಿಯ ಸಂಚಾಲಕರಾಗಿ ಜಯರಾಮ ನೆಲ್ಲಿತ್ತಾಯ ಆಯ್ಕೆಯಾದರು. ಈಗಾಗಲೇ ಇರುವ ಬೈಲುವಾರು ಸಮಿತಿ ಸರ್ವರು ಕ್ರಿಯಾಶೀಲರಾಗುವಂತೆ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಿಳಿಸಿದರು. ಅಲ್ಲದೇ ಜೀರ್ಣೋದ್ಧಾರ ಕಾರ್ಯಗಳು ಮುಗಿಯುವವರೆಗೆ ಭಕ್ತರರೆಲ್ಲರೂ ಸೋಮವಾರ ಒಂದು ಹೊತ್ತು ಉಪವಾಸ ಮಾಡುವ ಮೂಲಕ ಶ್ರದ್ಧಾ ಭಕ್ತಿಯನ್ನು ತೋರ್ಪಡಿಸಿಕೊಳ್ಳುವಂತೆ ವಿನಂತಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ದೇವಳದ ಪ್ರಧಾನ ಅರ್ಚಕ ರಮಾನಂದ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕುಶಾಲಪ್ಪ ಪುಡಿಕೆತ್ತೂರು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗ್ರಾಮದ ತೆರಿಗೆ ಅಧಿಕಾರಿ ಮಾಳವಿಕಾ, ಶ್ರೀರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು.
ಮೇ ತಿಂಗಳಿನಲ್ಲಿ ಜೀರ್ಣೋದ್ಧಾರ ಸಂಬಂಧ ಮಹಾಸಭೆ ನಡೆಸಲಾಗುತ್ತಿದ್ದು, ಕ್ಷೇತ್ರದ ಶಾಸಕರು ಹಾಗೂ ಪುತ್ತೂರು ಶಾಸಕರನ್ನು ಆಮಂತ್ರಿಸಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಅದೇ ದಿನ ಶ್ರೀ ಕ್ಷೇತ್ರದ ಭಕ್ತರೆಲ್ಲರೂ ಕೊಕ್ಕಡ ದೇವಳದಿಂದ ಶ್ರೀ ಕ್ಷೇತ್ರ ಸೌತಡ್ಕಕ್ಕೆ ಜೀರ್ಣೋದ್ಧಾರ ಸಂಬಂಧ ಪಾದಯಾತ್ರೆ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.
ಮೇ 2 ರಂದು ಭಕ್ತರೆಲ್ಲರ ಸಹಕಾರದೊಂದಿಗೆ ಶ್ರೀ ದೇವಳದ ಸ್ವಚ್ಛತಾ ಕಾರ್ಯವು ನಡೆಯಲಿದ್ದು ಭಕ್ತರ ಸಹಕಾರಿಸಲಾಯಿತು. ಮೇ 4 ರಂದು ಸಂಜೆ 5:00 ಗಂಟೆಗೆ ಜೀರ್ಣೋದ್ಧಾರ ಕಾರ್ಯಗಳು ಕುರಿತು ಬೈಲುವಾರು ಸಭೆ, ವಿವಿಧ ಸಮಿತಿಗಳ ರಚನೆ ನಡೆಯಲಿದೆ. ಮೇ 7ರಂದು ಶ್ರೀದೇವಳದಲ್ಲಿ ಧನ್ವಂತರಿ ಯಾಗ ನಡೆಯಲಿದೆ. ಭಕ್ತರರೆಲ್ಲರೂ ಸಹಕರಿಸುವಂತೆ ಸಮಿತಿ ಈ ಸಂದರ್ಭದಲ್ಲಿ ವಿನಂತಿಸಿರುತ್ತಾರೆ
1. ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರು ದೇವಳದ ಪುಷ್ಕರಣಿ ಅಭಿವೃದ್ಧಿಗಾಗಿ 50 ಲಕ್ಷ ಹಾಗೂ ಜೀರ್ಣೋದ್ಧಾರ ಕಾರ್ಯಗಳಿಗೆ 50 ಲಕ್ಷ ರೂ.ವನ್ನು ಮಂಜೂರುಗೊಳಿಸಿರುತ್ತಾರೆ.
2. ಉಪ್ಪಾರು ಸುಬ್ರಹ್ಮಣ್ಯ ಉಪ್ಪಾರ್ಣರ ವತಿಯಿಂದ ದೇವಳದಲ್ಲಿರುವ ಗಣಪತಿಯ ಗುಡಿಯ ನಿರ್ಮಾಣ ಕಾರ್ಯ ನಡೆಯಲಿದೆ.
3. ಬಿಲ್ಲವ ಸಮಾಜದ ಭಕ್ತರಿಂದ ಉಳ್ಳಾಳ್ತಿ ಗುಡಿಯ ನಿರ್ಮಾಣ ನೆರವೇರಲಿದೆ.
4. ಬೆಂಗಳೂರಿನ ವಿಷ್ಣುದಯಾ ಕಂಪೆನಿಯ ವಿಷ್ಣುಮೂರ್ತಿ ಪರ್ಲತ್ತಾಯರ ವತಿಯಿಂದ ವಿಷ್ಣುಮೂರ್ತಿ ಗುಡಿಯ ನಿರ್ಮಾಣ ಕಾರ್ಯ ನಡೆಯಲಿದೆ.