

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವ ಚಾರ್ಮಾಡಿ ಘಾಟಿ ರಸ್ತೆ ಅಗಲೀಕರಣಕ್ಕೆ ಕೇಂದ್ರದ ಮಟ್ಟದಲ್ಲಿ ತಾತ್ಕಾಲಿಕ ಹಿನ್ನಡೆ ಎದುರಾಗಿದೆ. ಘಾಟಿ ರಸ್ತೆ ಅಭಿವೃದ್ಧಿಗಾಗಿ 39 ಎಕರೆ ಅರಣ್ಯ ಭೂಮಿ ಬಳಕೆ ಹಾಗೂ 7,540 ಮರಗಳ ತೆರವಿಗೆ ಸಂಬಂಧಿಸಿದ ಪ್ರಸ್ತಾವನೆಗೆ ಕೇಂದ್ರ ಹಲವು ಪ್ರಶ್ನೆಗಳನ್ನು ಎತ್ತಿದೆ. ಇದರಿಂದ 343.74 ಕೋಟಿ ರೂ. ವೆಚ್ಚದ ಯೋಜನೆಯ ಮುಂದಿನ ಹಂತದ ಬಗ್ಗೆ ಅನಿಶ್ಚಿತತೆ ಮೂಡಿದೆ.
ಚಾರ್ಮಾಡಿ ಘಾಟಿಯ ಸುಮಾರು 11 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಘಾಟಿಯ ತಿರುವುಗಳು, ಕಿರಿದಾದ ರಸ್ತೆ, ವಾಹನ ದಟ್ಟಣೆ ಹಾಗೂ ಸಂಚಾರದ ಅಪಾಯಗಳನ್ನು ಕಡಿಮೆ ವಾಡುವ ಉದ್ದೇಶದಿಂದ ಈ ಕಾಮಗಾರಿ ಮಹತ್ವ ಪಡೆದಿದೆ. ಆದರೆ, ರಸ್ತೆ ಅಭಿವೃದ್ಧಿಗಾಗಿ ಅರಣ್ಯ ಪ್ರದೇಶವನ್ನು ಬಳಸುವ ಪ್ರಸ್ತಾವನೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಆಕ್ಷೇಪಗಳು ಎದುರಾಗಿವೆ.
ಯೋಜನೆಗಾಗಿ ಗುರುತಿಸಲಾಗಿರುವ 39 ಎಕರೆ ಅರಣ್ಯ ಭೂಮಿಯಲ್ಲಿ ಮರಗಳನ್ನು ತೆರವುಗೊಳಿಸುವುದರಿಂದ ಉಂಟಾಗಬಹುದಾದ ಪರಿಸರ ಪರಿಣಾಮಗಳ ಬಗ್ಗೆ ಕೇಂದ್ರವು ಮಾಹಿತಿ ಕೇಳಿದೆ. ಕುದುರೆಮುಖ-ಪುಷ್ಪಗಿರಿ ಅರಣ್ಯ ಪ್ರದೇಶಗಳ ನಡುವಿನ ಹುಲಿ ಕಾರಿಡಾರ್ ಹಾಗೂ ವನ್ಯಜೀವಿಗಳ ಸಂಚಾರದ ಮೇಲೆ ಯೋಜನೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಪರಿಶೀಲನೆ ಅಗತ್ಯವಾಗಿದೆ. ವನ್ಯಜೀವಿ ಇಲಾಖೆಯ ಅನುಮತಿ ಪ್ರಕ್ರಿಯೆ, ಅರಣ್ಯ ಭೂಮಿ ಬಳಕೆಗೆ ಸಂಬಂಧಿಸಿದ ಷರತ್ತುಗಳು ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಸಮಗ್ರವಾಗಿ ವಿವರಿಸುವಂತೆ ಸೂಚಿಸಿರುವುದು ಯೋಜನೆಗೆ ಮತ್ತಷ್ಟು ಸವಾಲು ತಂದಿದೆ.
ಚಾರ್ಮಾಡಿ ಘಾಟಿಯಲ್ಲಿ ಹಿಂದಿನ ವರ್ಷಗಳಲ್ಲಿ ಸಂಭವಿಸಿರುವ ಭೂಕುಸಿತಗಳ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹಿಂದಿನ ಕಾಮಗಾರಿಗಳ ಬಳಿಕ ಸುಮಾರು 45 ಭೂಕುಸಿತಗಳು ದಾಖಲಾಗಿರುವುದನ್ನು ಉಲ್ಲೇಖಿಸಿ, ಹೊಸ ಯೋಜನೆಯಿಂದ ಭೂಕುಸಿತದ ಅಪಾಯ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಘಾಟಿಯ ಭೌಗೋಳಿಕ ರಚನೆ, ಮಣ್ಣಿನ ಸ್ಥಿರತೆ, ಮಳೆನೀರಿನ ಹರಿವು ಹಾಗೂ ಇಳಿಜಾರು ಪ್ರದೇಶಗಳ ಸುರಕ್ಷತೆಯ ಕುರಿತು ಸೂಕ್ತ ಭೂವೈಜ್ಞಾನಿಕ ಅಧ್ಯಯನ ನಡೆಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.
ಪಶ್ಚಿಮ ಟ್ಟದ ಸೂಕ್ಷ್ಮ ಪರಿಸರ ವಲಯದಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಪರಿಸರದ ಸಮತೋಲನಕ್ಕೆ ಆದ್ಯತೆ ನೀಡಬೇಕೆಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಮರಗಳ ತೆರವು, ವನ್ಯಜೀವಿಗಳ ಆವಾಸಸ್ಥಾನದ ನಾಶ ಮತ್ತು ಭೂಕುಸಿತದ ಅಪಾಯಗಳನ್ನು ಸಮಗ್ರವಾಗಿ ಅಧ್ಯಯನ ವಾಡದೆ ಯೋಜನೆಯನ್ನು ಮುಂದುವರಿಸಬಾರದು ಎಂಬ ಒತ್ತಾಯವೂ ಕೇಳಿಬಂದಿದೆ.
ಕೇಂದ್ರದ ಪ್ರಶ್ನೆಗಳಿಗೆ ಅಗತ್ಯವಿರುವ ಪೂರಕ ಮಾಹಿತಿ ಸಲ್ಲಿಸಿ, ಅನುಮತಿ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಕೇಂದ್ರದ ಆಕ್ಷೇಪಣೆಗಳಿಗೆ ನೀಡುವ ಉತ್ತರ, ಪರಿಸರ ಪರಿಣಾಮಗಳ ಮೌಲ್ಯಮಾಪನ ಹಾಗೂ ಯೋಜನೆಯಲ್ಲಿ ವಾಡಲಾಗುವ ಸಂಭಾವ್ಯ ಬದಲಾವಣೆಗಳು ಮುಂದಿನ ನಿರ್ಧಾರಕ್ಕೆ ನಿರ್ಣಾಯಕವಾಗಲಿವೆ.