ದಾಖಲಾತಿ ಇಲ್ಲದೆ ತೆರೆಯದ ಬಾಲಕಿಯರ ಹಾಸ್ಟೆಲ್ : 2.5 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ

ಕಡಬದಲ್ಲಿರುವ ಅಲ್ಪಸಂಖ್ಯಾತ ಬಾಲಕಿಯರ ಸುಸಜ್ಜಿತ ಕಟ್ಟಡ.
ಕಡಬದಲ್ಲಿರುವ ಅಲ್ಪಸಂಖ್ಯಾತ ಬಾಲಕಿಯರ ಸುಸಜ್ಜಿತ ಕಟ್ಟಡ.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಕೊರತೆಯಿಂದ ವಿದ್ಯಾರ್ಥಿನಿಲಯವೇ ಬಂದ್
  • 2.5 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ
  • ಸ್ವಂತ ಜಮೀನಿಗಾಗಿ ಕಂದಾಯ ಇಲಾಖೆಗೆ ಬೇಡಿಕೆ
ವಿಜಯವಾಣಿ ಸುದ್ದಿಜಾಲ ಕಡಬ
ಸುಮಾರು 2.5 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಕಡಬದ ಅಲ್ಪಸಂಖ್ಯಾತ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ 4 ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಮುಚ್ಚಿಕೊಂಡಿದ್ದು, ಇದೀಗ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮೌಲಾನಾ ಅಜಾದ್ ಮಾದರಿ ಶಾಲೆ ಆರಂಭಗೊಂಡಿದೆ.
ಹಲವು ವರ್ಷಗಳಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲ್ಪಡುತ್ತಿದ್ದ ಕಡಬದ ಅಲ್ಪಸಂಖ್ಯಾತ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಸ್ವಂತ ಕಟ್ಟಡ ಬೇಕೆನ್ನುವ ಬೇಡಿಕೆಯಂತೆ ಕಡಬದ ಅಂಬೇಡ್ಕರ್ ಭವನದ ಬಳಿ 25 ಸೆಂಟ್ಸ್ ಜಮೀನು ಕಾದಿರಿಸಿ 2.5 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು 4 ವರ್ಷಗಳೇ ಕಳೆದಿವೆ. ಮಂಗಳೂರಿನ ದ.ಕ. ನಿರ್ಮಿತಿ ಕೇಂದ್ರದ ಮೂಲಕ ಕಟ್ಟಡದ ನಿರ್ಮಾಣ ಕಾಮಗಾರಿ ನಡೆದಿದೆ. ಸ್ವಂತ ಕಟ್ಟಡ ನಿರ್ಮಾಣವಾದ ಬಳಿಕ ವಿದ್ಯಾರ್ಥಿಗಳ ಕೊರತೆಯಿಂದಾಗಿ ವಿದ್ಯಾರ್ಥಿನಿಲಯವೇ ಬಂದ್ ಆಗಿದೆ.
ಮೌಲಾನಾ ಅಜಾದ್ ಶಾಲೆಗೆ ಜಮೀನು ಆಗಬೇಕಿದೆ: ಕಡಬದಲ್ಲಿ ಮೌಲಾನಾ ಅಜಾದ್ ಮಾದರಿ ಶಾಲೆಗೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 40 ವಿದ್ಯಾರ್ಥಿಗಳು ದಾಖಲಾಗಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮೌಲಾನಾ ಅಜಾದ್ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಗಳಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಕಡಬದಲ್ಲಿಯೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ತಮ್ಮದೆ ಇಲಾಖೆಯ ಹಾಸ್ಟೆಲ್ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ತರಗತಿ ಆರಂಭಿಸಿದ್ದು, ಸ್ವಂತ ಜಮೀನಿಗಾಗಿ ಕಂದಾಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕಡಬ ಮೌಲಾನಾ ಅಜಾದ್ ಮಾದರಿ ಶಾಲೆ ಪ್ರಭಾರ ಮುಖ್ಯಶಿಕ್ಷಕ ಅವಿನಾಶ್ ತಿಳಿಸಿದ್ದಾರೆ.

ಕಳೆದ ಕರೋನ ಸಂದರ್ಭದಲ್ಲಿ ಮುಚ್ಚಿಕೊಂಡಿದ್ದ ವಿದ್ಯಾರ್ಥಿನಿಲಯ ಬಳಿಕ ವಿದ್ಯಾರ್ಥಿಗಳ ದಾಖಲಾತಿ ನಡೆದಿಲ್ಲ. ವಿದ್ಯಾರ್ಥಿನಿಲಯಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಖಾಲಿ ಇದ್ದ ಈ ಕಟ್ಟಡದಲ್ಲಿ ಕಡಬಕ್ಕೆ ಹೊಸದಾಗಿ ಮಂಜೂರುಗೊಂಡಿರುವ ಮೌಲಾನಾ ಅಜಾದ್ ಮಾದರಿ ಶಾಲೆಯನ್ನು ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಲಾಗಿದೆ. ಮೌಲಾನಾ ಅಜಾದ್ ಮಾದರಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಿ ಕೊಡಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net