ಅನಿಶ್ಚಿತಾವಸ್ಥೆಯಲ್ಲಿ ಆಸ್ಪತ್ರೆ ಕಾಮಗಾರಿ

ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು, ಭೂತಬಂಗಲೆಯಂತಾಗಿದೆ.
ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು, ಭೂತಬಂಗಲೆಯಂತಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • 13 ವರ್ಷ ಕಳೆದರೂ ಈಡೇರದ ಭರವಸೆ
  • ಮತ್ತೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಪ್ರಾರಂಭ
ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ತೆರೆದು ಕಾರ್ಯಾಚರಿಸುವ ಭರವಸೆಯಲ್ಲಿದ್ದ ಜನರಿಗೆ 13 ವರ್ಷ ಕಳೆದರೂ ಉತ್ತರ ಲಭಿಸದಾಗಿದೆ. 2013 ನವೆಂಬರ್ 30ರಂದು ಕೇರಳದ ಅಂದಿನ ಮುಖ್ಯಮಂತ್ರಿ ಊಮನ್ ಚಾಂಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಲಾನ್ಯಾಸ ನಡೆಸಿದ್ದು, 2014-15ರಲ್ಲಿ ಶೈಕ್ಷಣಿಕ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. 2018 ನವೆಂಬರ್ 25ರಂದು ಆಸ್ಪತ್ರೆ ಬ್ಲಾಕ್ ಕಟ್ಟಡಕ್ಕೆ ಶಿಲಾನ್ಯಾಸ ನಡೆದು, ಆಡಳಿತ ಕಟ್ಟಡ, ವಿದ್ಯಾರ್ಥಿ ನಿಲಯ, ಶಿಕ್ಷಕರ ವಸತಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ತಿಗೊಂಡರೂ ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ.

ಎಂಬಿಬಿಎಸ್ ತರಗತಿ ಆರಂಭ

ಈ ಗೊಂದಲಗಳ ನಡುವೆಯೂ ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಲಭಿಸಿದ ಹಿನ್ನೆಲೆಯಲ್ಲಿ ಎಂಬಿಬಿಎಸ್ ತರಗತಿ ಆರಂಭಿಸಲಾಗಿದೆ. ಕಾಮಗಾರಿ ಅರ್ಧದಲ್ಲಿರುವುದರಿಂದ ಎಂಬಿಬಿಎಸ್ ತರಗತಿಯನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ಸ್ಥಿತಿ ಎದುರಾಗಿದೆ. ಆಸ್ಪತ್ರೆ ಕಟ್ಟಡ ಪೂರ್ತಿಗೊಳಿಸುವಂತೆ ಆಗ್ರಹಿಸಿ ಹಲವಾರು ಪ್ರತಿಭಟನೆ ನಡೆದಿವೆ. ಆಸ್ಪತ್ರೆ ಕಟ್ಟಡದ ವಿಳಂಬ ಗತಿಯ ಕಾಮಗಾರಿ ಪ್ರತಿಭಟಿಸಿ ಹಲವು ಸಂಘಟನೆಗಳು ಹೋರಾಟಕ್ಕಿಳಿಯುತ್ತಿದ್ದರೂ ಸರ್ಕಾರ ತನ್ನ ನೀತಿ ಬದಲಿಸುತ್ತಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಸರ್ಕಾರಿ ವಲಯದಲ್ಲಿ ಉನ್ನತ ಚಿಕಿತ್ಸಾ ಸೌಲಭ್ಯವಿಲ್ಲದಿರುವುದರಿಂದ ಜಿಲ್ಲೆಯ ಬಡ ಹಾಗೂ ಅಶಕ್ತ ರೋಗಿಗಳು ಇತರ ಜಿಲ್ಲೆ ಅಥವಾ ರಾಜ್ಯವನ್ನು ಆಶ್ರಯಿಸಬೇಕಾದ ಅನಿವಾರ್ಯತೆಯಿದೆ.

ವಿಶಿಷ್ಟ ಪ್ರತಿಭಟನೆ

ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಆಡಳಿತ ವಿಭಾಗ ಕಟ್ಟಡ ಕಾಮಗಾರಿ ಪೂರ್ತಿಗೊಂಡಿದ್ದು, ಆಸ್ಪತ್ರೆ ಕಟ್ಟಡ ಕೆಲಸ ವಿಳಂಬವಾಗಿ ಸಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆ ಬೃಹತ್ ಕಟ್ಟಡ ಅಕ್ಷರಶಃ ಭೂತಬಂಗಲೆಯಂತಾಗಿದ್ದು, ಇತ್ತೀಚೆಗೆ ಐಕ್ಯರಂಗದ ವತಿಯಿಂದ ಆಸ್ಪತ್ರೆಯಲ್ಲಿ ವಿಶಿಷ್ಟ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆಸ್ಪತ್ರೆ ಕಟ್ಟಡದೊಳಗೆ ಒಟ್ಟು ಸೇರಿದ ಕಾರ್ಯಕರ್ತರು, ಏಕಾಏಕಿ ಬೊಬ್ಬಿಡುತ್ತಾ ಕಟ್ಟಡದೊಳಗೆ ‘ಪ್ರೇತ ಸೇರಿಕೊಂಡಿರುವುದಾಗಿ’ ಹೊರಕ್ಕೆ ಧಾವಿಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಅನಿರ್ದಿಷ್ಟಾವಧಿ ಪ್ರತಿಭಟನೆಗೆ

ಜಿಲ್ಲೆಯ ಜನರು ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆಗಾಗಿ 13 ವರ್ಷಗಳಿಂದ ಕಾಯುತ್ತಿದ್ದರೂ ಸರ್ಕಾರ ಕಟ್ಟಡ ಕಾಮಗಾರಿ ಪೂರ್ತಿಗೊಳಿಸುವಲ್ಲಿ ತೋರುವ ನಿರ್ಲಕ್ಷೃ ಧೋರಣೆ ಖಂಡಿಸಿ ಹೋರಾಟ ಸಮಿತಿ ಮತ್ತೆ ಹೋರಾಟಕ್ಕೆ ಮುಂದಾಗಿದೆ. ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರು ಸೇರಿದಂತೆ ಜಿಲ್ಲೆಯ ಅನಾರೋಗ್ಯಪೀಡಿತರಿಗೆ ಭರವಸೆಯ ಕೇಂದ್ರವಾಗಬೇಕಾಗಿದ್ದ ವೈದ್ಯಕೀಯ ಕಾಲೇಜು ಆಸ್ಪತ್ರೆ ಶಿಥಿಲಾವಸ್ಥೆಗೆ ತಲುಪದಂತೆ ಸರ್ಕರ ನೋಡಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net