ಭೂಕಂಪ, ಕರೋನಾ ಮಹಾಮಾರಿ, ಯುದ್ಧದಂತಹ ಸಂಕಷ್ಟದ ಸಂದರ್ಭಗಳಲ್ಲಿ ನಿರಾಶ್ರಿತರಿಗೆ ಆಸರೆಯಾಗಿ ನಿಂತ ಶಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘ. ಸಂಸ್ಕೃತಿ ವಿಕೃತಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಸ್ತ್ರೀಯರು ಹಾಗೂ ಸಮಾಜಕ್ಕೆ ಸಂಸ್ಕಾರಯುತ ಜೀವನ ರೂಪಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು ಎಂದು ಮೂಡುಬಿದಿರೆ ಜೈನಮಠದ ಶ್ರೀ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಹೊಸಬೆಟ್ಟು ಮಂಡಲದ ತೋಡಾರು, ಇರುವೈಲು, ಪುಚ್ಚಮೊಗರು ಹಾಗೂ ಹೊಸಬೆಟ್ಟು ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸ್ವಾಮೀಜಿ ಗೋಪೂಜೆ ನೆರವೇರಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಹಿಂದೂ ಸಂಗಮದ ಅಂಗವಾಗಿ ಮಕ್ಕಳಿಗೆ ಧಾರ್ಮಿಕ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಪುರಾಣ ಪ್ರಸಿದ್ಧ ಪಾತ್ರಗಳಲ್ಲಿ ಮಿಂಚಿದ ಮಕ್ಕಳು ಗಮನ ಸೆಳೆದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.