ಹೆದ್ದಾರಿ ಕ್ರಾಸಿಂಗ್ ಸವಾಲು!

ಸಾರ್ವಜನಿಕರಲ್ಲಿ ಆತಂಕ ಪೊಲೀಸ್ ಪಹರೆ, ಮೇಲ್ಸೇತುವೆ ಬೇಡಿಕೆ
ರಾ.ಹೆ. ಕೆ.ಸಿ.ರೋಡು ಜಂಕ್ಷನ್.
ರಾ.ಹೆ. ಕೆ.ಸಿ.ರೋಡು ಜಂಕ್ಷನ್.
Published on: 

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗುವ ಕಲ್ಲಾಪು ಮತ್ತು ಕೆ.ಸಿ.ರೋಡ್ ಜಂಕ್ಷನ್ ವಾಹನ ಮಾತ್ರವಲ್ಲದೆ ಜನನಿಬಿಡ ಪ್ರದೇಶವೂ ಆಗಿದೆ. ಈ ಎರಡೂ ಭಾಗದಲ್ಲಿ ಸಾರ್ವಜನಿಕರಿಗೆ ಹೆದ್ದಾರಿ ದಾಟುವುದೇ ಸವಾಲೆನಿಸಿದೆ.

ನೇತ್ರಾವತಿ ಸೇತುವೆ ಬಳಿಕ ತಲಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಲ್ಲಾಪು, ಕುಂಪಲ ಬೈಪಾಸ್, ಕೊಲ್ಯ, ಉಚ್ಚಿಲ, ಕೆ.ಸಿ.ರೋಡು ಜಂಕ್ಷನ್‌ಗಳು ವಾಹನ ಮತ್ತು ಜನನಿಬಿಡವಾಗಿದೆ.

ಕೆ.ಸಿ.ರೋಡ್ ಜಂಕ್ಷನ್ ತಲಪಾಡಿ ಭಾಗದಿಂದ ಬರುವವರಿಗೂ ಕ್ರಾಸಿಂಗ್ ಆಗಿರುವುದರಿಂದ ಸನಿಹದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳೂ ಇಲ್ಲಿಂದಲೇ ಹೆದ್ದಾರಿ ದಾಟಬೇಕಿದೆ. ಅದರೆ ಇಲ್ಲಿ ಹೆದ್ದಾರಿ ದಾಟಲು ಸಹಕಾರ ಮಾಡುವ ನಿಟ್ಟಿನಲ್ಲಿ ಪೊಲೀಸ್ ಅಥವಾ ಗೃಹರಕ್ಷಕರ ವ್ಯವಸ್ಥೆಯೇ ಇಲ್ಲ. ಗ್ರಾಮ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳ ಆಡಳಿತ ಇರುವಾಗ ವರ್ಷಕ್ಕೆರಡು ಬಾರಿ ನಡೆಯುತ್ತಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿಷಯ ಪ್ರಸ್ತಾಪಿಸುತ್ತಾ ಬಂದರೂ ಪ್ರಯೋಜನ ಆಗಿಲ್ಲ. ಅದರಿಂದಾಗಿ ಇಲ್ಲಿ ಹೆದ್ದಾರಿ ದಾಟಲು ಮಹಿಳೆಯರು ಮತ್ತು ಮಕ್ಕಳು ಹರಸಾಹಸಪಡಬೇಕಾಗುತ್ತದೆ. ಶಾಲೆ ಬಿಟ್ಟಾಗ ಮಕ್ಕಳು ಮನೆಗೆ ತಲುಪುವವರೆಗೆ ಪಾಲಕರು ಆತಂಕದಿಂದಲೇ ಕಾಯಬೇಕಾಗುತ್ತದೆ.

ಕಲ್ಲಾಪುವಿನಲ್ಲೂ ಬಿಗಡಾಯಿಸಿದ ಪರಿಸ್ಥಿತಿ

ನೇತ್ರಾವತಿ ಸೇತುವೆಯಿಂದ ಮುಂದಕ್ಕೆ ಬರುವಾಗ ಸಿಗುವ ಕಲ್ಲಾಪು ಜಂಕ್ಷನ್‌ನಲ್ಲಿ ಕುತ್ತಾರ್, ಅಂಬ್ಲಮೊಗರು ಸಂಪರ್ಕ ಕಲ್ಪಿಸುವ ಅಡ್ಡರಸ್ತೆ, ಹೆದ್ದಾರಿ ಪಕ್ಕದಲ್ಲೇ ಶಾಲೆಯೂ ಇದೆ. ದಿನವಿಡೀ ವಾಹನ ಗಿಜಿಗುಡುವುದರಿಂದ ಸಾರ್ವಜನಿಕರು ರಸ್ತೆ ದಾಟುವುದಕ್ಕೆ ಕಷ್ಟಪಡಬೇಕಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಶಾಲೆ ಬಿಟ್ಟಾಗ ಇಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತದೆ. ಪೊಲೀಸ್ ಅಥವಾ ಗೃಹರಕ್ಷಕರ ಪಹರೆ ಇದ್ದರೂ ವಾಹನಗಳನ್ನು ನಿಯಂತ್ರಿಸಲು ಹರ ಸಾಹಸಪಡಬೇಕಾಗುತ್ತದೆ.

ಸುರಂಗ ಮಾರ್ಗ ಅಗತ್ಯ

ಇವೆರಡು ಪ್ರದೇಶ ಮಾತ್ರವಲ್ಲದೆ ಉಚ್ಚಿಲದಲ್ಲೂ ಎರಡು ಮಕ್ಕಳು ಹೆದ್ದಾರಿ ದಾಟಿಯೇ ಶಾಲೆಗೆ ಹೋಗಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮೇಲ್ಸೇತುವೆ ಅಥವಾ ಸುರಂಗ ಮಾರ್ಗದ ಅವಶ್ಯಕತೆಯಿದೆ. ಪ್ರಸ್ತುತ ಸರ್ವೀಸ್ ರಸ್ತೆಗೆ ಡಿಪಿಆರ್ ಸಿದ್ಧವಾಗುತ್ತಿದ್ದು, ಅಪಾಯ ಇರುವಲ್ಲಿ ಕ್ರಾಸಿಂಗ್ ವ್ಯವಸ್ಥೆಯತ್ತಲೂ ರಾ.ಹೆ.ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಬೇಕಿದೆ. ಅದುವರೆಗೆ ಜನಜಂಗುಳಿ ಇರುವಲ್ಲಿ ಪೊಲೀಸ್ ಅಥವಾ ಗೃಹರಕ್ಷಕರನ್ನು ನೇಮಿಸಬೇಕಿದೆ.

ಮುಗಿಯದ ವ್ಯಾಪಾರದ ಗೋಳು

ನೇತ್ರಾವತಿ ಸೇತುವೆ ದಾಟಿ ತಲಪಾಡಿಯತ್ತ ಸಾಗುವಾಗ ಹಲವೆಡೆ ಹೆದ್ದಾರಿಗೆ ತಾಗಿಯೇ ಮೀನು, ತರಕಾರಿ, ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯುವುದು ಕಾಣಲು ಸಿಗುತ್ತದೆ. ಗ್ರಾಹಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುವುದರಿಂದಲೂ ಅಪಘಾತದ ಅಪಾಯ ಇದೆ. ಸರ್ವೀಸ್ ರಸ್ತೆ ನಿರ್ಮಾಣ ನಿಟ್ಟಿನಲ್ಲಿ ಅಧಿಕಾರಿಗಳು ಹೆದ್ದಾರಿ ಬದಿಯ ವ್ಯಾಪಾರ ತೆರವುಗೊಳಿಸಿದರೂ ಮತ್ತೆ ಹಿಂದಿನಂತೆಯೇ ಆರಂಭಗೊಂಡಿದ್ದು ಇದಕ್ಕೆ ಶಾಶ್ವತ ಪರಿಹಾರ ಅಗತ್ಯವಿದೆ.

ಕೆ.ಸಿ.ರೋಡ್‌ನಲ್ಲಿ ರಸ್ತೆಯಲ್ಲೇ ವಾಹನ ನಿಲ್ಲಿಸಲಾಗುತ್ತಿದ್ದು ಫುಟ್‌ಪಾತ್ ಇಲ್ಲದ ಕಾರಣ ಶಾಲಾ ಮಕ್ಕಳು, ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡಬೇಕಿದೆ. ರಾ.ಹೆ. ಅಡ್ಡ ದಾಟುವುದು ಸವಾಲಾಗಿದೆ. ಇಲ್ಲಿ ಪೊಲೀಸ್ ಪಹರೆ, ಸುರಂಗ ಮಾರ್ಗ ಅಥವಾ ಮೇಲ್ಸೇತುವೆ ಅಗತ್ಯವಿದ್ದು ಗ್ರಾಮಸಭೆಯಲ್ಲಿ ನಿರಂತರ ವಿಷಯ ಪ್ರಸ್ತಾಪಿಸಿದರೂ ಪ್ರಯೋಜನ ಆಗಿಲ್ಲ.
ಅಬ್ಬಾಸ್ ಉಚ್ಚಿಲ್, ಸಾಮಾಜಿಕ ಕಾರ್ಯಕರ್ತ
ಕಲ್ಲಾಪುವಿನಲ್ಲಿ ಹೆದ್ದಾರಿ ದಾಟುವುದು ಕಷ್ಟಕರ ಆಗಿರುವುದರಿಂದ ಪಾದಚಾರಿ ಮೇಲ್ಸೇತುವೆ ರಚಿಸುವಂತೆ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅವರು ನಿರಾಕರಿಸಿದ್ದರು. ನಗರಸಭೆಯಿಂದಲೇ ಇದನ್ನು ಮಾಡಬೇಕಿದ್ದು, ಈ ಬಗ್ಗೆ ಅನುದಾನಕ್ಕಾಗಿ ಶಾಸಕರಿಗೆ ಮನವಿ ಮಾಡುತ್ತೇವೆ.
ದಿನೇಶ್ ರೈ, ಮಾಜಿ ಉಪಾಧ್ಯಕ್ಷ, ಉಳ್ಳಾಲ ಪುರಸಭೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net