

ಅನ್ಸಾರ್ ಇನೋಳಿ ಉಳ್ಳಾಲ
ಒಂದೆಡೆ ಊರಿಡೀ ಹರಿದಾಡುತ್ತಿರುವ ವಸತಿ ಸಂಕೀರ್ಣದ ಶೌಚನೀರು, ದುರ್ನಾತ ಮತ್ತು ಸೊಳ್ಳೆಗಳ ಕಾಟದಿಂದ ಕಾಯಿಲೆ ಭೀತಿ. ಮತ್ತೊಂದೆಡೆ ಮುಚ್ಚಳವಿಲ್ಲದೆ ತೆರೆದುಕೊಂಡಿರುವ ಬೃಹತ್ ಶೌಚಗುಂಡಿಗಳಿಂದ ಜೀವಹಾನಿಯ ಆತಂಕ. ಇದು ಅಸೈಗೋಳಿಯಲ್ಲಿರುವ ಕೆಎಸ್ಆರ್ಪಿ 7ನೇ ಪಡೆಯ ವಸತಿಗೃಹ ಸೃಷ್ಟಿಸಿರುವ ದುಃಸ್ಥಿತಿ.
1993ರಲ್ಲಿ ನಿರ್ಮಾಣಗೊಂಡಿರುವ ಈ ವಸತಿ ಸಂಕೀರ್ಣದಲ್ಲಿ 457 ಮನೆಗಳಿದ್ದು, 2,000ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಶೌಚನೀರು ಶೇಖರಣೆಯ ಗುಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ ಪೈಪ್ಗಳು ಹಾಗೂ ಗುಂಡಿಗಳು ಬ್ಲಾಕ್ ಆಗಿ, ತ್ಯಾಜ್ಯ ನೀರು ಹೊರಗಡೆ ಬೇಕಾಬಿಟ್ಟಿ ಹರಿಯುತ್ತಿದೆ.
ಈ ಕಲುಷಿತ ನೀರು ಕೆಎಸ್ಆರ್ಪಿ ಆವರಣದಿಂದ ಹೊರಬಂದು ಐಟಿಐ ಕಾಲೇಜು ದಾಟಿ ಮಂಜನಾಡಿ ಗ್ರಾಮ ವ್ಯಾಪ್ತಿಯ ನಿವೇಶನಗಳು, ಸಾಮಾನಿಗೆ ರಸ್ತೆ ಹಾಗೂ ಅರಸರಮೂಲೆ ಗುಡ್ಡ ಪ್ರದೇಶದಲ್ಲಿ ಹರಿಯುತ್ತಿದೆ. ಇಡೀ ಪರಿಸರದಲ್ಲಿ ದುರ್ವಾಸನೆ ಹರಡಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಸಂಜೆ ನಾಲ್ಕು ಗಂಟೆಯ ಬಳಿಕ ಸೊಳ್ಳೆಗಳ ಕಾಟಕ್ಕೆ ಮನೆ ಬಾಗಿಲು ತೆರೆಯುವುದೇ ಅಸಾಧ್ಯವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಕ್ಯಾಂಪಸ್ನಲ್ಲಿರುವ ಬೃಹತ್ ಶೌಚಗುಂಡಿಗಳ ಮುಚ್ಚಳಗಳನ್ನು ತೆರೆದಿಡಲಾಗಿದೆ. ಈ ಗುಂಡಿಗಳ ಸಮೀಪದಲ್ಲೇ ಆಟದ ಮೈದಾನವಿದ್ದು, ಕ್ರೀಡಾಕೂಟಗಳು ನಡೆಯುತ್ತಿರುತ್ತವೆ. ಸಾರ್ವಜನಿಕರು ಮತ್ತು ಜಾನುವಾರುಗಳು ಇಲ್ಲಿ ಸಂಚರಿಸುತ್ತಿದ್ದು, ತೆರೆದ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯ ಸದಾ ಎದುರಾಗಿದೆ.
ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಎಸ್ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ನಿರ್ಮಿಸಲು 11.15 ಕೋಟಿ ರೂ. ಅನುದಾನ ಅಗತ್ಯ ಎಂದು ಇಂಜಿನಿಯರ್ಗಳು ಎರಡು ವರ್ಷಗಳ ಹಿಂದೆಯೇ ಅಂದಾಜು ಪಟ್ಟಿ ನೀಡಿದ್ದರು. ಈ ಕುರಿತು ಕೆಎಸ್ಆರ್ಪಿಯಿಂದ ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದರ ಪರಿಷ್ಕರಣೆ ಬಳಿಕ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು ಎಂಬ ಉತ್ತರ ಕಳೆದ ವರ್ಷದ ಜುಲೈನಲ್ಲಿ ಬಂದಿದ್ದರೂ, ಇಂದಿಗೂ ಯಾವುದೇ ಪ್ರಗತಿ ಕಂಡಿಲ್ಲ.
ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಸಮಸ್ಯೆಯಿಂದಾಗಿ ವಸತಿಗೃಹದಲ್ಲಿರುವ ಸಿಬ್ಬಂದಿ ಮತ್ತು ಅವರ ಕುಟುಂಬಗಳೂ ನರಕಯಾತನೆ ಅನುಭವಿಸುತ್ತಿವೆ. ಈ ಬಗ್ಗೆ ಕಾರುಣ್ಯ ಫೌಂಡೇಶನ್ ಮೂಲಕ ಅರುಣ್ ಡಿಸೋಜ ಅವರು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.