ಗ್ರಾಮ ಸ್ವಚ್ಛತೆ ಕಾಪಾಡಲು ಕಠಿಣ ಕ್ರಮ : ಅಬ್ದುಲ್ ಮಜೀದ್ ಎಂ.ಪಿ.

‘ಹರೇಕಳ ಕಸೋತ್ಸವ’ ಜಾಗೃತಿ ಕಾರ್ಯಕ್ರಮದಲ್ಲಿ ಸ್ವಚ್ಛ ಸಂಕೀರ್ಣ ನಿರ್ವಾಹಕರಾದ ಸುಜಾತಾ, ಶಾರದಾ ಹಾಗೂ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.
‘ಹರೇಕಳ ಕಸೋತ್ಸವ’ ಜಾಗೃತಿ ಕಾರ್ಯಕ್ರಮದಲ್ಲಿ ಸ್ವಚ್ಛ ಸಂಕೀರ್ಣ ನಿರ್ವಾಹಕರಾದ ಸುಜಾತಾ, ಶಾರದಾ ಹಾಗೂ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.
Published on
ಹರೇಕಳದಲ್ಲಿ ತ್ಯಾಜ್ಯ ನಿರ್ವಹಣೆ ಇನ್ನಷ್ಟು ಪರಿಣಾಮಕಾರಿಗೊಳಿಸಲು ಮಕ್ಕಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಇತರ ಗ್ರಾಮದ ಜನರು ನಮ್ಮ ಗ್ರಾಮದಲ್ಲಿ ಕಸ ಎಸೆಯುತ್ತಿದ್ದಾರೆ, ಈಗಾಗಲೇ ಕೆಲವು ವಾಹನಗಳನ್ನು ಪತ್ತೆ ಮಾಡಲಾಗಿದ್ದು, ಮುಂದಕ್ಕೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ. ಎಚ್ಚರಿಸಿದ್ದಾರೆ.
ಹರೇಕಳ ಗ್ರಾಪಂ, ಹಸಿರುದಳ ಹಾಗೂ ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಕಾಲೇಜು ಆಶ್ರಯದಲ್ಲಿ ಹರೇಕಳ ಗ್ರಾಪಂನಲ್ಲಿ ಬುಧವಾರ ‘ಹರೇಕಳ ಕಸೋತ್ಸವ’ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕಣ್ಣೆದುರು ರಸ್ತೆಬದಿ ಕಸ ಎಸೆಯುವವರನ್ನು ಕಂಡರೆ ಪ್ರಶ್ನಿಸುವ ಗುಣ ಬೆಳೆಸಿಕೊಂಡು ಗ್ರಾಮದ ಸ್ವಚ್ಛತೆಗೆ ಕೈಜೋಡಿಸಬೇಕು ಪಿಡಿಒ ಮುತ್ತಪ್ಪ ಡಿ. ಮನವಿ ಮಾಡಿದರು. ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಮಾತನಾಡಿದರು.
ಕಾರ್ಯಕ್ರಮ ಪ್ರಯುಕ್ತ ಸ್ವಚ್ಛತಾ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಬೀದಿ ನಾಟಕ, ರಸಪ್ರಶ್ನೆ, ಉತ್ತಮ ಕಸ ನಿರ್ವಹಣೆ ಗ್ರಾಮಸ್ಥರ ಗುರುತಿಸುವಿಕೆ, ಕಸ ಪ್ರದರ್ಶನ, ಮಾರಾಟ ಮಳಿಗೆ ಮುಂತಾದ ವ್ಯವಸ್ಥೆ ಮಾಡಲಾಗಿತ್ತು. ಹರೇಕಳ ಶ್ರೀರಾಮಕೃಷ್ಣ ಶಾಲೆ, ನಿಶಾರ ಶಾಲೆ, ನ್ಯೂಪಡ್ಪು ಸರ್ಕಾರಿ ಶಾಲೆ, ಬಿಐಟಿ ಕಾಲೇಜು, ರಾಜಗುಡ್ಡೆ ಸರ್ಕಾರಿ ಶಾಲೆ, ಇಸ್ಲಾಹಿ ಶಾಲೆ ಮಕ್ಕಳು ಭಾಗವಹಿಸಿದ್ದರು. ಹರೇಕಳ ಕಡವಿನಿಂದ ಗ್ರಾಪಂವರೆಗೆ ಜಾಗೃತಿ ಜಾಥಾ ನಡೆಯಿತು.
ಸ್ವಚ್ಛ ಸಂಕೀರ್ಣ ನಿರ್ವಾಹಕರಾದ ಸುಜತಾ, ಶಾರದಾ ಹಾಗೂ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು. ನಿರಂತರ ಸಹಕಾರ ನೀಡುತ್ತಿರುವ ಅಮೀರಾ, ಅಂಗನವಾಡಿ ಕಾರ್ಯಕರ್ತೆಯರಾದ ಝುಬೇದಾ ಮತ್ತು ಪವಿತ್ರ ಅವರನ್ನು ಗೌರವಿಸಲಾಯಿತು.
ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಕಾರ್ಯದರ್ಶಿ ಕೆ.ತಾರಾಕ್ಷಿ, ನ್ಯೂಪಡ್ಪು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಮುಸ್ತಫಾ, ಸಂಜೀವಿನಿ ಒಕ್ಕೂಟ ಮೇಲ್ವಿಚಾರಕಿ ನಿವೇದಿತ, ರಾಮಕೃಷ್ಣ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಭವ್ಯ, ಹಸಿರುದಳ ಮೇಲ್ವಿಚಾರಕಿ ರೇಖಾ, ರಾಜಗುಡ್ಡೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಗೀತಾ, ಬಿಐಟಿ ಉಪನ್ಯಾಸಕಿ ಆಯಿಶಾ ಜುನೈದ್ ಮೊದಲಾದವರು ಉಪಸ್ಥಿತರಿದ್ದರು.
ಹಸಿರುದಳದ ವ್ಯವಸ್ಥಾಪಕ ನಾಗರಾಜ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

ಕಸದಲ್ಲಿ ಗರ್ಭಪಾತದ ಭ್ರೂಣ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net