

ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ವಿಜಯದಶಮಿಯಂದು ಬುಧವಾರ ಮಧ್ಯಾಹ್ನ ಜರುಗಿದ ರಥಾರೋಹಣ ಹಾಗೂ ರಾತ್ರಿ ಜರಗಿದ ರಥೋತ್ಸವವನ್ನು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ಕಣ್ತುಂಬಿಕೊಂಡರು.
ರಾತ್ರಿ ಸುಮಾರು 8 ಗಂಟೆಗೆ ಕಲಶಾಭಿಷೇಕ, ವೇವರ ಬಲಿ ಬಳಿಕ ಕ್ಷೇತ್ರದ ಮುಂಭಾಗದಿಂದ ರಾಜಮಾರ್ಗದಲ್ಲಿ ಹೊರಟ ರಥ ಮಾರ್ನಮಿಕಟ್ಟೆಗೆ ತೆರಳುವ ದಾರಿ ನಡುವೆ ಬನ್ನಿಮರದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿತು. ಮಾರ್ನಮಿಕಟ್ಟೆ ಸುತ್ತುವರಿದು ಕ್ಷೇತ್ರಕ್ಕೆ ಮರಳುವ ದಾರಿಯಲ್ಲಿ ಭಕ್ತರು ಅಲ್ಲಲ್ಲಿ ಆರತಿ ಎತ್ತಿ, ಹಣ್ಣುಕಾಯಿ ನೀಡಿ ಪ್ರಸಾದ ಸ್ವೀಕರಿಸಿದರು.
ರಥ ಪ್ರಯಾಣದುದ್ದಕ್ಕೂ ಜನದಟ್ಟನೆಯ ನಡುವೆ ಸಮೀಪ ತಲುಪಲು ಸಾಧ್ಯವಾಗದ ಭಕ್ತರು ದೂರದಿಂದಲೇ ಭಕ್ತಿಯ ಘೋಷಣೆಗಳನ್ನು ಕೂಗಿದರು. ವಿವಿಧ ಪೌರಾಣಿಕ, ಜಾನಪದ, ಸಾಂಸ್ಕೃತಿಕ ಸ್ತಬ್ದಚಿತ್ರಗಳು, ಚೆಂಡೆ ತಂಡ, ಸರ್ವ ವಾದ್ಯಗಳ ಹಿಮ್ಮೇಳ, ಬಾನಲ್ಲಿ ವೈವಿಧ್ಯಮಯ ಚಿತ್ತಾರಗಳನ್ನು ರಚಿಸಿದ ಸಿಡಿಮದ್ದು ಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು.
ಉತ್ಸವದ ಭಾಗವಾಗಿ ಬೆಳಗ್ಗೆ ಭತ್ತದ ತೆನೆ ತಂದು ಗರ್ಭಗುಡಿಯಲ್ಲಿ ಪೂಜೆ ನೆರವೇರಿಸಿ ಬಳಿಕ ಭಕ್ತರಿಗೆ ಹಂಚಲಾಯಿತು. ವಿಜಯದಶಮಿಯಂದು ದೇವಳಕ್ಕೆ ತೆನೆ ತಂದು ಮನೆಯಲ್ಲಿ ಹೊಸ ಅಕ್ಕಿ ಊಟ ಮಾಡುವುದು ವಿಶೇಷ.
ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ನವರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್, ಅನುವಂಶಿಕ ಮೊಕ್ತೇಸರರಾದ ಜಿ.ರಘುರಾಮ ಉಪಾಧ್ಯಾಯ, ಎಸ್.ಹರೀಶ್ ಐತಾಳ್, ಪರ್ಯಾಯ ಪ್ರಧಾನ ಅರ್ಚಕ ಬಿ.ಶ್ರೀನಿವಾಸ್ ಐತಾಳ್ ಮೊದಲಾದವರು ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ದೇವರ ಸನ್ನಿಧಿಯಲ್ಲಿ ಸರಸ್ವತಿ ಪೂಜೆ ಬಳಿಕ ಮಕ್ಕಳಿಗೆ ವಿದ್ಯಾರಂಭ ನಡೆಯಿತು. ಭಕ್ತರು ಸಂಕಷ್ಟಗಳ ಸಂದರ್ಭ ಹೇಳಿದ ಹರಕೆಗಳ ಸಲುವಾಗಿ ಮಂಗಳಾದೇವಿಗೆ ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ದೇವರ ಬಲಿ ಉತ್ಸವ, ರಥಾರೋಹಣ ನಡೆಯಿತು. ಅ.22ರಂದು ಅವಭೃತ ಮಂಗಳ ಸ್ನಾನ, ಅ.23ರಂದು ಸಂಪ್ರೋಕ್ಷಣೆ, ಸಂಜೆ 6.30ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ.