ವಿಚ್ಛಿದ್ರಕಾರಿ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಅಗತ್ಯ ಕ್ರಮ

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
Published on
ಮಂಗಳೂರು: ಅಭಿವೃದ್ಧಿಗೆ ತೊಡಕಾಗಿರುವ ವಿಚ್ಛಿದ್ರಕಾರಿ ಮತ್ತು ಸಮಾಜ ಒಡೆಯುವ ದುಷ್ಟ ಶಕ್ತಿಗಳನ್ನು ಸರ್ಕಾರ ಸಹಿಸದು. ಸಮಾಜದಲ್ಲಿ ಶಾಂತಿ ಸಾಮರಸ್ಯ ಸ್ಥಾಪಿಸಿ ಎಲ್ಲಾ ಧರ್ಮೀಯರು ಪರಸ್ಪರ ಸಮನ್ವಯತೆಯ ಜೀವನ ನಡೆಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿ ಅವರು ಸಂದೇಶ ನೀಡಿದರು.
ಯಾವುದೇ ಶಕ್ತಿಯಾಗಲೀ, ವ್ಯಕ್ತಿಯಾಗಲೀ ತಮ್ಮ ವೈಯಕ್ತಿಕ ಲಾಭಕ್ಕಾಗಿ ಇಲ್ಲಿಯ ಯುವಕರ ದಾರಿ ತಪ್ಪಿಸಿ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹ ನೀಡುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯದು ಎಂದವರು ಎಚ್ಚರಿಕೆ ನೀಡಿದರು.
ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಸಹಕಾರ ಅಗತ್ಯವಾಗಿದೆ. ಸರ್ಕಾರದ ಪ್ರಯತ್ನದಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಭೂಮಿಕೆ ಸಿದ್ಧಗೊಂಡಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಿಂದ ಇಲ್ಲಿನ ಯುವಕರು ಉದ್ಯೋಗವನ್ನು ಅರಸಿ, ಬೇರೆ ದೇಶ, ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಮತ್ತು ಇಲ್ಲಿನ ಯುವಕರುಗಳಿಗೆ ಇಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಜಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮಂಗಳೂರು ಮೀನುಗಾರಿಕಾ ಬಂದರಿನ ಆಧುನಿಕ ಯೋಜನೆಯನ್ನು ಸುಮಾರು 37 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 320 ಮೀಟರ್ ಉದ್ದದ ಹೊಸ ಜೆಟ್ಟಿ ನಿರ್ಮಾಣ, ಎಲ್ಲಾ ರೀತಿಯ ಆಧುನಿಕ ಮೂಲಸೌಕರ್ಯಗಳು, ಹರಾಜು ಮಳಿಗೆಗಳ ಪುನರ್ ನಿರ್ಮಾಣ, ಒಳಚರಂಡಿ ವ್ಯವಸ್ಥೆಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಸಿ ಶೀಘ್ರವಾಗಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು ಎಂದರು.
ನವದೆಹಲಿ ಮೂಲದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ ಅವರು ಪರೇಡ್ ದಂಡ ನಾಯಕಿಯಾಗಿ ಕನ್ನಡದಲ್ಲಿ ಪರೇಡ್ ನಿರ್ವಹಿಸಿದರು.
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಅತ್ಯಧಿಕ ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ಈ ಬಾರಿ ಕಂಪ್ಯೂಟರ್ ಬದಲಾಗಿ ತಲಾ 50,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಪರೇಡ್‌ನಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದ ಸೇವಾದಳ ಮುಲ್ಲಕಾಡು ಶಾಲೆಯ ತಂಡಕ್ಕೆ ಪ್ರಥಮ ಹಾಗೂ ಸ್ಕೌಟ್ಸ್ ಹುಡುಗರ ತಂಡ ಸರ್ಕಾರಿ ಪ್ರೌಢ ಶಾಲೆ ಕಿನ್ನಿಕಂಬಳ ತಂಡಗಳಿಗೆ ದ್ವಿತೀಯ ಸ್ಥಾನದ ರೋಲಿಂಗ್ ಶೀಲ್ಡ್ ನೀಡಿ ಅಭಿನಂದಿಸಲಾಯಿತು.
15 ವರ್ಷಗಳ ಕಾಲ ಕೆಎಸ್‌ಆರ್ ಟಿಸಿಯಲ್ಲಿ ಅಪಘಾತ ರಹಿತವಾಗಿ ದುಡಿದ ಚಾಲಕರನ್ನು ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಐಜಿಪಿ ಅಮಿತ್ ಸಿಂಗ್ , ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿಅರುಣ್ ಕೆ., ಅಪರ ಜಿಲ್ಲಾಧಿಕಾರಿ ರಾಜು, ಎಂಎಲ್ಸಿ ಐವನ್ ಡಿಸೋಜ, ವಿವಿಧ ನಿಗಮ, ಅಕಾಡೆಮಿ ಅಧ್ಯಕ್ಷರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸಾವಿನ ಬಳಿಕ ಅಂಗಾಂಗ ದಾನ ಮಾಡಿದ ಸಿಂಧುಶ್ರೀ ಅವರ ಕುಟುಂಬವನ್ನು ಈ ಸಂದರ್ಭ ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಬೆಟರ್ಡ್ ರೆಸಲ್ , ಯೆನೆಪೋಯ, ಕಾರ್ಮೆಲ್, ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಪ್ರದರ್ಶನಗೊಂಡಿತು.
ಮಂಜುಳಾ ಶೆಟ್ಟಿ ಮತ್ತು ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net