

ಬಂಟ್ವಾಳ: ಮೈಸೂರಿನಲ್ಲಿ ನಡೆದ ಕಂಬಳದಲ್ಲಿ ಮಂಗಳೂರಿನ ಶಕ್ತಿನಗರ ಪದವು ಕಾನಡ್ಕ ಫ್ಲೇವಿ ಡಿಸೋಜ ಅವರ ಕೋಣಗಳು ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ಚಿನ್ನದ ಪದಕ ಗಳಿಸಿವೆ. ಕಂಬಳ ಕೂಟದಲ್ಲಿ ಸಿಕ್ಕ ಒಂದು ಪವನ್ ತೂಕದ ಚಿನ್ನದ ಪದಕವನ್ನು ತಮ್ಮ ಜತೆಗೆ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ವೀರಪ್ಪ ಅವರಿಗೆ ನೀಡುವ ಮೂಲಕ ಫ್ಲೇವಿ ಡಿಸೋಜ ಮಾನವೀಯತೆ ಮೆರೆದಿದ್ದಾರೆ.
ವೀರಪ್ಪ ಅವರು ಪದವು ಕಾನಡ್ಕ ತಂಡದಲ್ಲಿ ಸುದೀರ್ಘ ಕಾಲದಿಂದ ಕಂಬಳದ ಕೋಣಗಳ ಆರೈಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅನಾರೋಗ್ಯ ಕಾಡಿದ ಕಂಬಳದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಅವರು ಮಾಡಿದ ಸೇವೆಯನ್ನು ಕೋಣದ ಮಾಲೀಕರು ಮರೆಯಲಿಲ್ಲ. ಈ ಬಾರಿಯ ಮೊದಲ ಕಂಬಳದಲ್ಲಿ ಗೆದ್ದ ಚಿನ್ನದ ಪದಕವನ್ನು ವೀರಪ್ಪ ಅವರಿಗೆ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.
ಈ ಮೊದಲು ಕೂಡ ಪದವು ಕಾನಡ್ಕ ತಂಡ ಚಿನ್ನದ ಪದಕವನ್ನು ಅನಾರೋಗ್ಯಪೀಡಿತರಿಗೆ ನೀಡುವ ಮೂಲಕ ಗಮನಸೆಳೆದಿತ್ತು. 2024ರಲ್ಲಿ ಬಂಟ್ವಾಳದ ನಾವೂರ ಕಂಬಳದಲ್ಲಿ ಪದವು ಕಾನಡ್ಕ ದೂಜ ಇದ್ದ ಕೋಣ ಪ್ರಥಮ ಬಹುಮಾನ ಪಡೆದಿತ್ತು. ಆಗ ದೊರಕಿದ್ದ ಚಿನ್ನದ ಪದಕವನ್ನು ಪದವು ಕಾನಡ್ಕ ತಂಡವು ಕಂಬಳ ಕರೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಸಾವ್ಯ ಗಂಗಾಧರ ಪೂಜಾರಿ ಎಂಬುವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿತ್ತು. ಇಂತಹುದೇ ಕಾರ್ಯವನ್ನು ಈ ಬಾರಿಯೂ ನಡೆಸಿರುವುದು ಶ್ಲಾಘನೆಗೆ ಪಾತ್ರವಾಗಿದೆ.
6 ಬಾರಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದ ಪದವು ಕಾನಡ್ಕದಲ್ಲಿದ್ದ ಬಹು ಪ್ರಸಿದ್ಧಿಯ ಕೋಣ ದೂಜನನ್ನು ಕಳೆದ ಒಂದೆರಡು ವರ್ಷದಿಂದ ಕಂಬಳ ಕರೆಯಲ್ಲಿ ಓಡಿಸುತ್ತಿಲ್ಲ. ಅದಕ್ಕಾಗಿ ಈಗ ಹೊಸ ಕೋಣಕ್ಕೆ ಮಿನಿ ದೂಜ ಎಂಬ ಹೆಸರಿಡಲಾಗಿದೆ. ಇದರ ಜತೆಗೆ ಜಾಕಿ ಇತ್ತೀಚೆಗೆ ನಡೆದ ಮೈಸೂರು ಕಂಬಳದಲ್ಲಿ ಚಿನ್ನದ ಪದಕ ಪಡೆದಿದೆ. ಕಾವೂರುದೋಟ ಸುದರ್ಶನ್ ಓಟಗಾರರಾಗಿದ್ದರು. ಪದವು ಕಾನಡ್ಕ ತಂಡದ ಎ ಹಾಗೂ ಬಿ ವಿಭಾಗ ಸೇರಿ ಸುಮಾರು 30 ಮಂದಿ ಕೆಲಸದಲ್ಲಿದ್ದಾರೆ.