ವೆನ್‌ಲಾಕ್ ಮೃತ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಳವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಳಿಕ ಅವರ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ನಾಪತ್ತೆಯಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.26ರಂದು ಬೆಳಗ್ಗೆ 8 ಗಂಟೆಗೆ ಸುಂದರ ಎಂಬವರ ಪತ್ನಿ ಜಾನಕಿ (53) ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಟೋ ರಿಕ್ಷಾದ ಮೂಲಕ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಹೃದಯ ಸಂಬಂಧಿತ ತಜ್ಞ ವೈದ್ಯರು ಲಭ್ಯವಿಲ್ಲದ ಕಾರಣ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿತ್ತು. ಬಳಿಕ ಜಾನಕಿ ಅವರನ್ನು ವೆನ್‌ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಪರೀಕ್ಷಿಸಿ, ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತದೇಹವನ್ನು ಪರಿಶೀಲಿಸುವ ವೇಳೆ ಜಾನಕಿ ಅವರ ಕೊರಳಲ್ಲಿ ಸುಮಾರು 32 ಗ್ರಾಂ ತೂಕದ ಮಾಂಗಲ್ಯ ಸರವಿದ್ದು, ಅದರಲ್ಲಿ ಸುಮಾರು 16 ಗ್ರಾಂ ಚಿನ್ನದ ಗುಂಡುಗಳು ಹಾಗೂ ಕರಿಮಣಿಗಳು ಇದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆದರೆ ನಂತರ ಮೃತದೇಹವನ್ನು ನೋಡಿದಾಗ ಕೊರಳಲ್ಲಿದ್ದ ಚಿನ್ನದ ಕರಿಮಣಿ ಮಾಂಗಲ್ಯ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಿಕರೊಂದಿಗೆ ಚರ್ಚಿಸಿದ ಬಳಿಕ ಸುಂದರ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net