

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ತಾಲೂಕುಮಟ್ಟದ ಅಗ್ನಿಶಾಮಕ ಠಾಣಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಇದೇ ವೇಳೆ ಸ್ಥಳೀಯರಿಗೆ ತರಬೇತಿ ನೀಡುವ ಮೂಲಕ ಜರ್ಮನಿ ಮಾದರಿಯತ್ತ ಸಚಿವರು ಒಲವು ತೋರಿಸಿದ್ದು ಯೋಜನೆ ಯಶಸ್ವಿಯಾದರೆ ದೇಶದಲ್ಲೇ ಪ್ರಥಮ ಪ್ರಯತ್ನ ಇದಾಗಲಿದೆ!.
ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ಯಾವುದೇ ಭಾಗದಲ್ಲಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ಪಡೆಯ ಅವಶ್ಯಕತೆ ಇದ್ದರೆ ಮಂಗಳೂರಿನಿಂದಲೇ ಬರಬೇಕಾಗುತ್ತದೆ. ಈ ವಿಚಾರ ಹಿಂದೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ಟೀಕೆಯ ಪ್ರಮುಖ ಅಸ್ತ್ರವಾಗಿತ್ತು. ಆದರೆ ಉಳ್ಳಾಲ ತಾಲೂಕು ಆದ ಬಳಿಕ ಇತರ ಸವಲತ್ತುಗಳ ಜತೆ ಅಗ್ನಿಶಾಮಕ ದಳ ಉಳ್ಳಾಲಕ್ಕೆ ಮಂಜೂರಾಗಿದೆ. ಪಜೀರ್ ಗ್ರಾಮದ ಕಂಬಳಪದವಿನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ.
ಉಳ್ಳಾಲ ತಾಲೂಕಿನಲ್ಲಿ ಈಗಾಗಲೇ ಮಂಗಳೂರು ವಿವಿ, ಖಾಸಗಿ ವೈದ್ಯಕೀಯ ಕಾಲೇಜು-ಆಸ್ಪತ್ರೆಗಳು, ಎ.ಪಿ.ಜೆ.ಅಬ್ದುಲ್ ಕಲಾಂ ಮಹಿಳೆಯರ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮೌಲಾನ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಡಿದೇವರಾಜು ಅರಸು ನರ್ಸಿಂಗ್ ವಿದ್ಯಾರ್ಥಿನಿಯರ ನಿಲಯ, ಐಟಿ ಸಂಸ್ಥೆ, ಭಾರಿ ವಾಹನ ತರಬೇತಿ ಕೇಂದ್ರವಿದೆ. ಇವೆಲ್ಲವೂ ಕೊಣಾಜೆಯ ಆಸುಪಾಸಿನಲ್ಲೇ ಇದೆ. ಇದೀಗ ಅಗ್ನಿಶಾಮಕ ಕಟ್ಟಡ ಇಲ್ಲೇ ನಿರ್ಮಾಣಗೊಂಡಿದೆ.
ಅಗ್ನಿಶಾಮಕ ಕಟ್ಟಡ ನಿರ್ಮಾಣಗೊಂಡ ಬಳಿಕ ಎರಡು ಲಘು, ಎರಡು ಭಾರಿ ವಾಹನಗಳು ಬರಲಿವೆ. ಸಿಬ್ಬಂದಿ ನೇಮಕವೂ ಆಗಬೇಕಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಸ್ಥಳೀಯ ಉತ್ಸಾಹಿಗಳಿಗೆ ತರಬೇತಿ ನೀಡುವ ಮೂಲಕ ಜರ್ಮನಿ ಮಾದರಿ ಅಳವಡಿಕೆಗೆ ಸಚಿವ ಯು.ಟಿ.ಖಾದರ್ ಆಸಕ್ತಿ ತೋರಿದ್ದಾರೆ.
ಜರ್ಮನಿಯಲ್ಲಿ ಅಗ್ನಿಶಾಮಕ ದಳಕ್ಕೆ ಕಟ್ಟಡ, ವಾಹನಗಳನ್ನು ಮಾತ್ರ ನೀಡಲಾಗುತ್ತಿದೆ. ಸಿಬ್ಬಂದಿಯಾಗಿ ಸ್ಥಳೀಯರೇ ಕಾರ್ಯನಿರ್ವಹಿಸುತ್ತಾರೆ. ಚಾಲಕನ ಸಹಿತ ಒಂದೊಂದು ತಂಡದಲ್ಲಿ ತಲಾ ಹತ್ತು ಮಂದಿ ಇರುತ್ತಾರೆ. ಅವರಿಗೆ ಯಾವುದೇ ವೇತನ ಇರುವುದಿಲ್ಲ. ಇದನ್ನು ಅಧ್ಯಯನ ಮಾಡಿ ಬಂದಿರುವ ಸಚಿವರು, ಇಲ್ಲೂ ಜರ್ಮನಿ ಮಾದರಿಯಲ್ಲಿ ಸ್ಥಳೀಯವಾಗಿ ಉತ್ಸಾಹಿತರನ್ನು ಆಯ್ಕೆ ಮಾಡಿ ಅಗ್ನಿ ಅಥವಾ ಇನ್ನಿತರ ಅವಘಡದ ಸಂದರ್ಭ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ತರಬೇತಿ ನೀಡುವ ವ್ಯವಸ್ಥೆಗೆ ಮುಂದಾಗಿದ್ದಾರೆ. ತುರ್ತು ಸಂದರ್ಭಗಳಲ್ಲಿ ತರಬೇತಿ ಪಡೆದವರು ಅಗ್ನಿಶಾಮಕ ಸಿಬ್ಬಂದಿಯ ಬರುವಿಕೆಯನ್ನು ಕಾಯದೆ ತಾವೇ ಕಾರ್ಯನಿರ್ವಹಿಸಿ ಅನಾಹುತ ತಪ್ಪಿಸಲು ಸಾಧ್ಯವಾಗಲಿದೆ ಎನ್ನುವ ಭಾವನೆ ಸಚಿವರದ್ದು. ಅವರ ಯೋಚನೆ ಯಾವ ಮಟ್ಟದಲ್ಲಿ ಲಕಾರಿಯಾಗಬಹುದು ಎನ್ನುವುದು ಮುಂದಿರುವ ಕುತೂಹಲ.