ಕಸ ರಸ್ತೆಬದಿ ಚೆಲ್ಲಾಪಿಲ್ಲಿ!

ತ್ಯಾಜ್ಯ ನಿರ್ವಹಣೆಯಲ್ಲಿ ಪುರಸಭೆ ವಿಫಲ
 ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು, ಪಲ್ಲಮಜಲು ಪರಿಸರದ ರಸ್ತೆಬದಿಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿರುವ ತ್ಯಾಜ್ಯ ರಾಶಿಯನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸಿದರು.
ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು, ಪಲ್ಲಮಜಲು ಪರಿಸರದ ರಸ್ತೆಬದಿಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿರುವ ತ್ಯಾಜ್ಯ ರಾಶಿಯನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸಿದರು.
Published on: 

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಆಸ್ತಿ ತೆರಿಗೆಯಲ್ಲೇ ಮನೆ-ಮನೆ ಕಸ ಸಂಗ್ರಹದ ಶುಲ್ಕವನ್ನು ಬಂಟ್ವಾಳ ಪುರಸಭೆ ವಸೂಲಿ ಮಾಡುತ್ತಿದೆ. ಆದರೆ ಇದೀಗ ವಾಹನಗಳ ಕೊರತೆಯಿಂದ ಸಮರ್ಪಕವಾಗಿ ಮನೆ-ಮನೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ ಎಂಬ ವ್ಯಾಪಕ ದೂರಿನ ಬೆನ್ನಲ್ಲೇ ಸಾರ್ವಜನಿಕರು ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲು ಆರಂಭಿಸಿದ್ದಾರೆ.

ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು, ಪಲ್ಲಮಜಲು ಪರಿಸರದ ರಸ್ತೆ ಬದಿಯುದ್ದಕ್ಕೂ ತ್ಯಾಜ್ಯ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ಬೆನ್ನಲ್ಲೇ ಪುರಸಭೆಯ ಕಸ ಸಂಗ್ರಹದ ವಾಹನ ಪೌರಕಾರ್ಮಿಕರು ಸಹಿತ ಸ್ಥಳಕ್ಕೆ ತೆರಳಿ ರಸ್ತೆ ಬದಿಯ ತ್ಯಾಜ್ಯ ತೆರವುಗೊಳಿಸಿ ಸ್ವಚ್ಚಗೊಳಿಸಿದ್ದಾರೆ.

ಪುರಸಭೆಯಲ್ಲಿ ಮನೆ-ಮನೆ ಕಸ ಸಂಗ್ರಹಕ್ಕಾಗಿ 12 ವಾಹನಗಳನ್ನು ಹೊಂದಿದ್ದರೂ ಇವುಗಳ ಪೈಕಿ 4 ವಾಹನಗಳು ಮಾತ್ರ ಚಾಲ್ತಿಯಲ್ಲಿದ್ದು, ಉಳಿದ 8 ವಾಹನಗಳು ಕಳೆದ 8 ತಿಂಗಳಿನಿಂದ ದುರಸ್ತಿಗಾಗಿ ಗ್ಯಾರೇಜ್‌ನಲ್ಲಿವೆ. ದುರಸ್ತಿಯಾದರೂ ಈ ವಾಹನಗಳಿಗೆ ಇನ್ನೂ ಗ್ಯಾರೇಜ್‌ನಿಂದ ಮುಕ್ತಿ ಸಿಕ್ಕಿಲ್ಲ. ಗ್ಯಾರೇಜ್‌ಗೆ ಈ ವಾಹನಗಳ ದುರಸ್ತಿಯ ಬಿಲ್ ಪಾವತಿಗೆ ಬಾಕಿಯಾಗಿರುವ ಹಿನ್ನಲೆಯಲ್ಲಿ ಅದು ಅಲ್ಲಿಂದ ಹೊರಗೆ ಬಂದಿಲ್ಲ ಎಂದು ಹೇಳಲಾಗಿದೆ.

ಈ ಬಗ್ಗೆ ಕಳೆದ ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಪ್ರಜಾಸೇವೆ ಅಂದೋಲನಾ ಸಭೆಯಲ್ಲಿ ದೂರು ದಾಖಲಾಗಿತ್ತು.ಆಗ ಶೀಘ್ರ ವಾಹನವನ್ನು ತರಿಸಿಕೊಳ್ಳುವ ಭರವಸೆ ನೀಡಿದ್ದು, ಪ್ರಜಾಸೇವೆ ನಡೆದು ವಾರವಾದರೂ ವಾಹನಗಳು ಮಾತ್ರ ಇನ್ನೂ ಗ್ಯಾರೇಜ್‌ನಲ್ಲೇ ಉಳಿದಿವೆ. ಪ್ರಜಾಸೇವೆ ಅಂದೋಲನಾ ಸಭೆಯಲ್ಲಿ ಸಾರ್ವಜನಿಕರು ಪರಿಹಾರ ಕೋರಿ ಸಲ್ಲಿಸುವ ದೂರಿಗೂ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂಬಂತಾಗಿದೆ.

ಪುರಸಭೆಯಲ್ಲಿ ಕಸ ವಿಲೇವಾರಿಯ ನಾಲ್ಕು ವಾಹನಗಳು ಮಾತ್ರ ಕಾರ್ಯಾಚರಿಸುವುದರಿಂದ ಮೂರು ಗ್ರಾಮಗಳನ್ನೊಳಗೊಂಡ ವಿಸ್ತಾರವಾದ ಪುರಸಭಾ ವ್ಯಾಪ್ತಿಯಲ್ಲಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ಮನೆ-ಮನೆ, ವಾಣಿಜ್ಯ ಸಂಕೀರ್ಣ, ಅಂಗಡಿಗಳ ಕಸ ವಿಲೇವಾರಿ ಸಾಧ್ಯವಾಗುತ್ತದೆ. ಕೆಲವೆಡೆ ವಾರ ಕಳೆದರೂ ಕಸ ಸಂಗ್ರಹಕ್ಕೆ ವಾಹನಗಳು ಅಗಮಿಸದ ದೂರುಗಳು ಇವೆ. ಈ ವೇಳೆ ಕೆಲ ಸಾರ್ವಜನಿಕರು ಬೇಸತ್ತು ಪುರಸಭೆ ಫೋನಾಯಿಸಿ ಸ್ವಾಗತಕಾರ ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡ ನಿದರ್ಶನವೂ ಇದೆ. ಇನ್ನು ಕೆಲವರು ತ್ಯಾಜ್ಯವನ್ನು ಪುರಸಭಾ ಕಚೇರಿ ಅವರಣದಲ್ಲೇ ತಂದು ಸುರಿಯುವ ಬೆದರಿಕೆ ಹಾಕಿದ್ದಾರೆ. ಆಗ ಕಸ ಸಂಗ್ರಹ ವಾಹನಗಳು ಕರೆ ಬಂದ ಸ್ಥಳಕ್ಕೆ ದೌಡಾಯಿಸುವ ಪ್ರಸಂಗ ನಿತ್ಯ ನಡೆಯುತ್ತಿದೆ.

ಇದರ ಭಾಗವೆಂಬಂತೆ ಮೊಡಂಕಾಪು, ಪಲ್ಲಮಜಲು ಪರಿಸರದಲ್ಲಿ ಸಾರ್ವಜನಿಕರು ರಸ್ತೆಯುದ್ದಕ್ಕೂ ಕಸ, ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಅನಿವಾರ್ಯ ಎಂಬಂತೆ ಎಸೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಬೀದಿ ನಾಯಿಗಳು ರಸ್ತೆಗೆ ಎಳೆದು ತಂದಿವೆ. ಪರಿಣಾಮ ಪರಿಸರವಿಡೀ ರ್ದುವಾಸನೆ ಬೀರಿ ಯಾರೋ ಇದರ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪುರಸಭೆಯ ಕಾರ್ಯವೈಖರಿಯನ್ನು ಅಣಕಿಸಿ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಪುರಸಭಾಧಿಕಾರಿ ಸಂಜೆಯ ವೇಳೆಗೆ ಕಸ ಸಂಗ್ರಹದ ವಾಹನ ಸಹಿತ ಪೌರಕಾರ್ಮಿಕರನ್ನು ಕಳಿಸಿ ತ್ಯಾಜ್ಯ ತೆರವುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net