ಎಫ್‌ಎಸ್‌ಟಿ ಘಟಕ ವಾಗ್ವಾದ

ಕಿನ್ನಿಗೋಳಿ ಪಪಂ ಸಭೆಯಲ್ಲಿ ತೀವ್ರ ಚರ್ಚೆ
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.
Published on: 

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆಯಿತು. ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಘನತ್ಯಾಜ್ಯ ಘಟಕದ ಕುರಿತು ಸಭೆಯಲ್ಲಿ ಪರ-ವಿರೋಧವಾಗಿ ತೀವ್ರ ಚರ್ಚೆ ನಡೆಯಿತು.

ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಘನತ್ಯಾಜ್ಯ ಘಟಕಕ್ಕೆ ಸಮೀಪದ ನಿವಾಸಿಗಳಿಂದ ವಿರೋಧವಿದೆ. ಯೋಜನೆಯಲ್ಲಿ ಸಮಸ್ಯೆ ಇದ್ದರೆ ಪ್ರಾರಂಭಿಸುವುದಿಲ್ಲ, ಆದರೆ ಕಳೆದ ಬಾರಿ ಪ್ರಾರಂಭವಾದ ಎಫ್.ಎಸ್.ಟಿ ಘಟಕಕ್ಕೆ ಯಾರ ವಿರೋಧವೂ ಇರಲಿಲ್ಲ. ಈಗ ಶೇ.90 ರಷ್ಟು ಕೆಲಸ ಮುಗಿದಿದೆ. ಕಾಂಗ್ರೆಸ್ ಸದಸ್ಯರು ವಿರೋಧಿಸುವುದು ಸರಿಯಲ್ಲ. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇದುವರೆಗೆ ವಿರೋಧ ವ್ಯಕ್ತಪಡಿಸದ ಸದಸ್ಯರು ಈಗ ಪ್ರತಿಭಟಿಸುವುದು ಸರಿಯಲ್ಲ, ಇದಕ್ಕೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ ನಾಯಕ ಮಿಥುನ್ ರೈ ಭೇಟಿ ನೀಡಿದಾಗ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳದಲ್ಲಿದ್ದರು. ಕಾಂಗ್ರೆಸ್ ನಾಯಕ ಮಿಥುನ್ ರೈ ಕೂಡ ಎಫ್.ಎಸ್.ಟಿಗೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದಿದ್ದಾರೆ. ಆದರೆ ಎಸ್‌ಟಿಪಿಗೆ ವಿರೋಧವಿದೆ ಎಂದಿದ್ದಾರೆ. ಕಾಂಗ್ರೆಸ್ ಸದಸ್ಯರು ಈ ಎರಡು ಯೋಜನೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.

ಇದಕ್ಕೆ ಉತ್ತರಿಸಿದ ಸದಸ್ಯೆ ಕೋಕಿಲ ಈ ಯೋಜನೆಗೆ ಸ್ಥಳೀಯರ ವಿರೋಧವಿದೆ, ಹೀಗಾಗಿ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಮತ್ತು ಕೆಲ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿ ಮತ್ತು ಮೇಲಧಿಕಾರಿಗಳಿಗೆ ದೂರು ಹೋಗಿದ್ದು ಇದನ್ನು ಪಟ್ಟಣ ಪಟ್ಟಣ ಪಂಚಾಯಿತಿ ಸದಸ್ಯ ಪ್ರಕಾಶ್ ಆಚಾರ್ಯ ನೀಡಿದ್ದಾರೆ ಎಂದಾಗ ಮುಖ್ಯಾಧಿಕಾರಿ ಮತ್ತು ಸದಸ್ಯ ಪ್ರಕಾಶ್ ಆಚಾರ್ಯ ಮಧ್ಯೆ ಮಾತಿನ ಚಕಮಕಿ ನಡೆದು, ಸೈಬರ್ ಕ್ರೈಮ್‌ಗೆ ದೂರು ನೀಡಲು ತೀರ್ಮಾನಿಸಲಾಯಿತು.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ 18 ವಾರ್ಡ್‌ನಲ್ಲಿ 53 ಲಕ್ಷ ರೂ. ನೀರಿನ ಬಿಲ್ ಬಾಕಿ ಇದ್ದು, ತ್ವರಿತವಾಗಿ ಬಿಲ್ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯಿಸಲಾಯಿತು.

ಗುರುರಾಜ ಮಲ್ಲಿಗೆಯಂಗಡಿ ಅಮೃತ್‌ಯೋಜನೆ ನೀರು ಯಾವಾಗ ಬರುತ್ತದೆ ಎಂದು ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅಧಿಕಾರಿ ಶರತ್ ಕಿನ್ನಿಗೋಳಿ ಪೇಟೆಯಲ್ಲಿ ಮತ್ತು ಕಟೀಲು ದೇವಸ್ಥಾನದ ಮುಂದೆ ಪೈಪ್‌ಲೈನ್ ಹಾಗೂ ಇನ್ನಿತರ ಕೆಲವು ಕಡೆಗಳಲ್ಲಿ ಕಾಮಗಾರಿ ನಡೆದಿಲ್ಲ. ರಸ್ತೆ ಅಗೆಯಲು ಪಿಡಬ್ಲುೃಡಿ ಇಲಾಖೆ ಮತ್ತು ಕಟೀಲು ದೇವಸ್ಥಾನದಿಂದ ಅನುಮತಿ ದೊರಕದೆ ತೊಡಕು ಉಂಟಾಗಿದೆ. ಮಾರ್ಚ್‌ನಲ್ಲಿ ಕಾಮಗಾರಿ ಮುಗಿದ ಕೂಡಲೇ ನೀರು ಸರಬರಾಜು ಮಾಡಲಾಗುವುದು ಎಂದರು.

ರಸ್ತೆ ಬದಿಯಲ್ಲಿ ವಾಹನದಲ್ಲಿ ವ್ಯಾಪಾರ ಮಾಡುವುದರಿಂದ ಕಿನ್ನಿಗೋಳಿ ಮುಖ್ಯರಸ್ತೆ ಬ್ಲಾಕ್ ಆಗುತ್ತದೆ. ಗುರುವಾರ ಸಂತೆಯ ದಿನ ಮತ್ತು ಬೆಳಗ್ಗೆ ಮತ್ತು ಸಂಜೆಯ ಸಂದರ್ಭ ಸಿಬ್ಬಂದಿ ನೇಮಿಸಬೇಕು ಎಂದು ಟ್ರಾಫಿಕ್ ಪೋಲಿಸರಿಗೆ ಅಧ್ಯಕ್ಷರು ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶಂಕರ್ ಪ್ರಸಾದ್, ಉಪಾಧ್ಯಕ್ಷೆ ಪದ್ಮಲತಾ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪುನರೂರು, ಪಪಂ ಸದಸ್ಯರು ಉಪಸ್ಥಿತರಿದ್ದರು.

ಮೇಳಗಳಿಗೆ ತಾರತಮ್ಯ ಸಲ್ಲ

ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಪ್ರತಿವರ್ಷ ಅನೇಕ ಯಕ್ಷಗಾನಗಳು ನಡೆಯುತ್ತವೆ. ಹೆಚ್ಚಿನ ಮೇಳಗಳಿಗೆ ಬಸ್ ನಿಲ್ದಾಣದಲ್ಲಿ ಯಕ್ಷಗಾನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಮಡಾಮಕ್ಕಿಯಂತಹ ಸಣ್ಣ ಮೇಳಗಳಿಗೆ ಬಸ್ ನಿಲ್ದಾಣದಲ್ಲಿ ಅವಕಾಶ ಕೊಡುವುದಿಲ್ಲ. ಅವರು ನೇಕಾರ ಸೌಧದ ಅವರಣದ ಒಳಗೆ ಮಾಡುತ್ತಾರೆ. ಮೇಳಗಳ ಮಧ್ಯೆ ತಾರತಮ್ಯ ಮಾಡಬಾರದು. ಈ ಬಗ್ಗೆ ಬಸ್ ಮಾಲೀಕರು ಚಾಲಕರ ಬಳಿ ಮಾತನಾಡಬೇಕು ಎಂದು ಸದಸ್ಯೆ ಸುನೀತ ಹೇಳಿದರು.

ಬ್ಯಾನರ್‌ಗಳಿಗೆ ಶುಲ್ಕ

ಕಿನ್ನಿಗೋಳಿ ಪೇಟೆಯಲ್ಲಿ ಬ್ಯಾನರ್ ಅಳವಡಿಸಲು ಶುಲ್ಕ ವಿಧಿಸಿ ಈ ಮೂಲಕ ಪಂಚಾಯಿತಿಗೆ ಆದಾಯ ಬರುವಂತೆ ಮಾಡಬೇಕೆಂದು ಎಂದು ಸದಸ್ಯ ಪ್ರಣೀಕ್ ಹೇಳಿದಾಗ ಧ್ವನಿಗೂಡಿಸಿದ ಲೀಕಯ್ಯ ಸಾಲಿಯಾನ್ ರಾಜಕೀಯದ ಬ್ಯಾನರ್‌ಗಳಿಗೆ ಕೂಡ ಶುಲ್ಕ ವಿಧಿಸಿ ಎಂದರು. ಧಾರ್ಮಿಕ ಕಾರ್ಯಕ್ರಮಗಳ ಸಮಿತಿ ವತಿಯಿಂದ ಅಳವಡಿಸುವ ಬ್ಯಾನರ್ ಬಿಟ್ಟು ಬೇರೆ ಬ್ಯಾನರ್‌ಗಳಿಗೆ ಶುಲ್ಕ ವಿಧಿಸಲಾಗುವುದೆಂದು ನಿರ್ಣಯಿಸಲಾಯಿತು.