ನಾಲ್ವರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ

ಕುದ್ರೋಳಿ ನಡುಪಳ್ಳಿಯ ಇಬ್ರಾಹಿಂ ಕಲೀಲ್
ಕುದ್ರೋಳಿ ನಡುಪಳ್ಳಿಯ ಇಬ್ರಾಹಿಂ ಕಲೀಲ್
Published on
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ನಾಲ್ವರು ಅಂತರ್‌ರಾಜ್ಯ ಗಾಂಜಾ ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಚೊಪ್ಪಡ ತಾಲೂಕು ಸಮತಾ ನಗರದ ಕರಣ್ ಬಾಬು ರಾಂ ಜಾದವ್ (27), ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಸಮೀರ್ ಶಾ (19), ಉಡುಪಿ ಹೆಜಮಾಡಿಯ ಎಂ.ಎಚ್.ಮಯ್ಯದಿ (48) ಹಾಗೂ ಕುದ್ರೋಳಿ ನಡುಪಳ್ಳಿಯ ಇಬ್ರಾಹಿಂ ಕಲೀಲ್ (47) ಬಂಧಿತರು. ಹೊರ ರಾಜ್ಯದಿಂದ ಗಾಂಜಾ ತಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿ ಅವರು ಮಾರಾಟ ಮಾಡುತ್ತಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
ಅವರ ವಶದಲ್ಲಿದ್ದ 22.250 ಕೆ.ಜಿ ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 11,12,500) ಮತ್ತು 6 ಮೊಬೈಲ್ ಪೋನ್ (ಅಂದಾಜು ಮೌಲ್ಯ ರೂ. 18,000) ಹಾಗೂ ಗಾಂಜಾ ಸಾಗಿಸಲು ಬಳಸಿದ ಸ್ಕೂಟರ್ ಗಳನ್ನು (ಅಂದಾಜು ಮೌಲ್ಯ ರೂ. 1,00,000) ಸೇರಿದಂತೆ 12,30,500 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದು, ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರ ಪೈಕಿ ಕರಣ್ ಬಾಬು ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು ಮಹಾರಾಷ್ಟ್ರದ ಮಯ್ಯದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರಿಂದ ಪಡೆದು ತಂದು ಉಡುಪಿ ಹೆಜಮಾಡಿ ಕೋಡಿಯ ಎಂ.ಎಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ರವರಿಗೆ ನೀಡುತ್ತಿದ್ದರು. ಈ ಇಬ್ಬರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಈ ಹಿಂದೆ ಕೂಡಾ ಹಲವು ಬಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net